ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: 52 ಗುತ್ತಿಗೆ ನೌಕರರ ವಜಾ

Published 2 ಮೇ 2024, 16:36 IST
Last Updated 2 ಮೇ 2024, 16:36 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮಹಿಳಾ ಆಯೋಗದಲ್ಲಿ (ಡಿಸಿಡಬ್ಲ್ಯು)‌ 52 ಮಂದಿ ಗುತ್ತಿಗೆ ಆಧಾರಿತ ನೌಕರರನ್ನು ದೆಹಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಇಲಾಖೆಯು ವಜಾ ಮಾಡಿದೆ.

ಈ ನೌಕರರನ್ನು ಅಕ್ರಮವಾಗಿ ನೇಮಕಾತಿ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಡಿಸಿಡಬ್ಲ್ಯುನಲ್ಲಿ ನಡೆಯುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ 2017ರ ಫೆಬ್ರುವರಿಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. 2017ರ ಜೂನ್‌ನಲ್ಲಿ ಸಮಿತಿ ಸಲ್ಲಿಸಿದ್ದ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಡಬ್ಲ್ಯುಸಿಡಿ ತಿಳಿಸಿದೆ.

ಇದಕ್ಕೂ ಮುನ್ನ, ಏಪ್ರಿಲ್‌ 29ರಂದು ಡಬ್ಲ್ಯುಸಿಡಿ ಹೊರಡಿಸಿದ್ದ ಆದೇಶದಲ್ಲಿ‌, 223 ಮಂದಿ ಗುತ್ತಿಗೆ ನೌಕರರನ್ನು ವಜಾಗೊಳಿಸಲು ನಿರ್ದೇಶಿಸಿತ್ತು. ಆದರೆ, ಇಲಾಖೆಯು ಗುರುವಾರ ಮತ್ತೊಂದು ಆದೇಶ ಹೊರಡಿಸಿದ್ದು, ‘ಅಕ್ರಮವಾಗಿ ನೇಮಕವಾದ 52 ಮಂದಿಯನ್ನು ಮಾತ್ರ ಕೆಲಸದಿಂದ ವಜಾಗೊಳಿಸುವಂತೆ ನಿರ್ದೇಶಿಸಲಾಗಿದೆ’ ಎಂದು ತಿಳಿಸಿದೆ.

‘ದೆಹಲಿ ಮಹಿಳಾ ಆಯೋಗದಲ್ಲಿ ಅಕ್ರಮವಾಗಿ 223 ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಅವುಗಳಲ್ಲಿ 52 ಮಂದಿ ಮಾತ್ರ ಕಾರ್ಯನಿರ್ವ‌ಹಿಸುತ್ತಿದ್ದರು. ಉಳಿದ ಹು‌ದ್ದೆಗಳು ಖಾಲಿ ಇದ್ದವು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಸಮಿತಿ ಸಲ್ಲಿಸಿದ್ದ ಶಿಫಾರಸುಗಳನ್ನು ಆಧರಿಸಿ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅವರು ಅದಕ್ಕೆ ಸಹಿ ಹಾಕಿದ್ದರು’ ಎಂದು ವಿವರಿಸಿದ್ದಾರೆ‌.

‘ಡಿಸಿಡಬ್ಲ್ಯುನಲ್ಲಿ ನಡೆದಿರುವ ಹಗರಣಗಳು ಮತ್ತು ಅಕ್ರಮ ಹುದ್ದೆಗಳನ್ನು ಸೃಷ್ಟಿಸಿ, ಗುತ್ತಿಗೆ ‌ನೌಕರರನ್ನು ನೇಮಿಸಿದ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ, ಇವುಗಳ ವಿಚಾರಣೆ ನಡೆಸಲು, ಅಂದಿನ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬಜಾಜ್‌ ಅವರು 2017ರ ಫೆಬ್ರುವರಿಯಲ್ಲಿ ಸಮಿತಿಯೊಂದನ್ನು ರಚಿಸಿದ್ದರು’ ಎಂದು ಡಬ್ಲ್ಯುಸಿಡಿ ತಿಳಿಸಿದೆ.

‘ಅಂದಿನ ಮುಖ್ಯ ಕಾರ್ಯದರ್ಶಿ ಸಮಿತಿಯ ಮುಖ್ಯಸ್ಥರಾಗಿದ್ದರು. ಪ್ರಧಾಣ ಕಾರ್ಯದರ್ಶಿ (ಆರ್ಥಿಕ ವಿಭಾಗ), ಕಾರ್ಯದರ್ಶಿ (ಡಬ್ಲ್ಯುಸಿಡಿ), ಕಾರ್ಯದರ್ಶಿ (ಕಾನೂನು ವಿಭಾಗ) ಇವರು ಸಮಿತಿಯ ಸದಸ್ಯರಾಗಿದ್ದರು. ತನಿಖೆ ನಡೆಸಿದ ಬಳಿಕ, ಮಹಿಳಾ ಆಯೋಗದಲ್ಲಿ ಅಕ್ರಮ ನೇಮಕಾತಿ ನಡೆದಿರುವುದು ಸಮಿತಿ ಗಮನಕ್ಕೆ ಬಂದಿತ್ತು’ ಎಂದು ಅದು ತಿಳಿಸಿದೆ.

‘ಮಂಜೂರಾತಿ ಇಲ್ಲದ ಹುದ್ದೆಗಳಿಗೆ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವುದು ಅನೂರ್ಜಿತವಾಗಿದ್ದು, ನೌಕರರನ್ನು ಅದೇ ಹುದ್ದೆಗಳಲ್ಲಿ ಮುಂದುವರಿಸುವುದು ಸಾಧ್ಯವಿಲ್ಲ ಎಂದು ಸಮಿತಿ ಶಿಫಾರಸು ಮಾಡಿತ್ತು’ ಎಂದೂ ಹೇಳಿದೆ.

ಮಾಲೀವಾಲ್‌ ಖಂಡನೆ: ಗುತ್ತಿಗೆ ನೌಕರರನ್ನು ವಜಾಗೊಳಿಸಿ ಹೊರಡಿಸಿದ ಆದೇಶವನ್ನು, ಡಿಸಿಡಬ್ಲ್ಯು ಮಾಜಿ ಮುಖ್ಯಸ್ಥೆ ಮತ್ತು ಎಎಪಿಯ ರಾಜ್ಯಸಭಾ ಸಂಸದೆ ಸ್ವಾ‌ತಿ ಮಲಿವಾಲ್‌ ಅವರು ಖಂಡಿಸಿದ್ದಾರೆ.

‘ಸಕ್ಸೇನಾ ಅವರು ‘ತುಘಲಕ್‌’ನ ರೀತಿಯಲ್ಲಿ ನಿರ್ಧಾರ ಕೈಗೊಂಡು ಡಿಸಿಡಬ್ಲ್ಯುನಲ್ಲಿರುವ ಎಲ್ಲ ಗುತ್ತಿಗೆ ನೌಕರರನ್ನು ವಜಾಗೊಳಿಸಿದ್ದಾರೆ. ಸಿಬ್ಬಂದಿಯನ್ನು ಕೆಲಸದಿಂದ ವ‌ಜಾ ಮಾಡಿದರೆ, ಮಹಿಳಾ ಆಯೋಗವನ್ನು ಮುಚ್ಚಬೇಕಾಗು‌ತ್ತದೆ. ರಕ್ತ ಮತ್ತು ಬೆವರನ್ನು ಹರಿಸಿ ಸಂಸ್ಥೆಯನ್ನು ಕಟ್ಟಲಾಗಿದೆ. ಇಂಥ ಸಂಸ್ಥೆಗೆ ಸಿಬ್ಬಂದಿ ಮತ್ತು‌ ರಕ್ಷಣೆ ನೀಡುವುದನ್ನು ಬಿಟ್ಟು, ನೀವು ಅದರ ಬೇರುಗಳನ್ನೇ ನಾಶ ಮಾಡಲು ಹೊರಟಿದ್ದೀರಿ‘’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT