ನವದೆಹಲಿ : ಅನ್‌ಲೈನ್ ಸುದ್ದಿಸಂಸ್ಥೆ ‘ತೆಹೆಲ್ಕಾ ಡಾಟ್ ಕಾಂ’ ವಿರುದ್ಧ ಸಲ್ಲಿಸಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ, ಸೇನೆ ಅಧಿಕಾರಿಯೊಬ್ಬರಿಗೆ ₹ 2 ಕೋಟಿ ನಷ್ಟ ಪರಿಹಾರ ಒದಗಿಸುವಂತೆ ದೆಹಲಿ ಹೈಕೋರ್ಟ್ ಸುದ್ದಿಸಂಸ್ಥೆಗೆ ಆದೇಶಿಸಿದೆ.
ರಕ್ಷಣಾ ಪರಿಕರಗಳ ಖರೀದಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರ ಕುರಿತು ಸುದ್ದಿಸಂಸ್ಥೆಯು ವರದಿ ಪ್ರಕಟಿಸಿತ್ತು. ಈ ವರದಿಯಿಂದಾಗಿ ತಮ್ಮ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಭಾರತೀಯ ಸೇನೆ ಅಧಿಕಾರಿಯೊಬ್ಬರು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.
ಮೇಜರ್ ಜನರಲ್ ಎಂ.ಎಸ್.ಅಹ್ಲುವಾಲಿಯಾ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಲ್ ಕೃಷ್ಣ ತೀರ್ಪು ನೀಡಿದರು. ತೆಹೆಲ್ಕಾ ಡಾಟ್ ಕಾಂ, ಅದರ ಮಾಲೀಕ ಸಂಸ್ಥೆ ಮೆಸರ್ಸ್ ಬಫುಲೊ ಕಮ್ಯುನಿಕೇಷನ್ಸ್, ಅದರ ಮಾಲೀಕ ತರುಣ್ ತೇಜ್‌ಪಾಲ್ ಮತ್ತು ವರದಿಗಾರರಾದ ಅನಿರುದ್ಧ ಬಹಲ್, ಮ್ಯಾಥ್ಯೂ ಸಾಮ್ಯುಯೆಲ್ ಈ ಮೊತ್ತ ಭರಿಸಬೇಕು ಎಂದು ಆದೇಶಿಸಿದರು.
‘ಪ್ರಾಮಾಣಿಕ ಅಧಿಕಾರಿ ವರ್ಚಸ್ಸಿಗೆ ತೀವ್ರ ಧಕ್ಕೆ ತರುವುದಕ್ಕೆ ಇದಕ್ಕಿಂತಲೂ ದೊಡ್ಡ ನಿದರ್ಶನವಿಲ್ಲ. ವರದಿ ಪ್ರಕಟವಾದ 23 ವರ್ಷಗಳ ನಂತರ ‘ಕ್ಷಮಾಪಣೆ’ ಪ್ರಕಟಿಸುವುದು ಅಸಮರ್ಪಕವಷ್ಟೇ ಅಲ್ಲ, ಅರ್ಥಹೀನ ಕೂಡಾ’ ಎಂದು ಕೋರ್ಟ್ ಹೇಳಿತು.
ಆದರೆ, ಸುದ್ದಿಸಂಸ್ಥೆ ಜೊತೆಗೆ ಒಪ್ಪಂದದ ಭಾಗವಾಗಿ ಈ ಸಂಬಂಧ ವರದಿ ಪ್ರಸಾರ ಮಾಡಿದ್ದ ಝೀ ಟೆಲಿಫಿಲ್ಮ್ ಲಿಮಿಟೆಡ್ ಮತ್ತು ಅದರ ಸಿಬ್ಬಂದಿಯಿಂದ ಮಾನಹಾನಿಯಾಗಿದೆ ಎಂದು ನಿರೂಪಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಕೋರ್ಟ್ ಹೇಳಿತು.
‘ತೆಹೆಲ್ಕಾ ಡಾಟ್ ಕಾಂ’ ಆನ್‌ಲೈನ್ ಸುದ್ದಿ ಸಂಸ್ಥೆಯು ಮಾರ್ಚ್ 13, 2001ರಲ್ಲಿ ಈ ಸುದ್ದಿ ಪ್ರಕಟಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.