ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಹಾಂಗಿರ್‌ಪುರಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ; 'ಸುಪ್ರೀಂ' ಮಧ್ಯ ಪ್ರವೇಶ

ನವದೆಹಲಿ: ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದ ಜಹಾಂಗಿರ್‌ಪುರಿಯಲ್ಲಿ ಉತ್ತರ ದೆಹಲಿಯ ಮುನ್ಸಿಪಲ್‌ ಕಾರ್ಪೊರೇಷನ್‌ (ಎನ್‌ಡಿಎಂಸಿ) ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದೆ. ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿದ್ದು, ತೆರವು ಕಾರ್ಯಾಚರಣೆ ನಿಲ್ಲಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.

ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹಿಳಾ ಪೊಲೀಸರು ಸೇರಿದಂತೆ ಕನಿಷ್ಠ 400 ಸಿಬ್ಬಂದಿ ನಿಯೋಜಿಸುವಂತೆ ಎನ್‌ಡಿಎಂಸಿ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಕೋರಿದ್ದರು.

ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಜಹಾಂಗಿರ್‌ಪುರಿಯ ಗಲಭೆಕೋರರಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಕೋರಿ ಎನ್‌ಡಿಎಂಸಿ ಮೇಯರ್‌ ರಾಜಾ ಇಕ್ಬಾಲ್‌ ಸಿಂಗ್‌ ಅವರಿಗೆ ಪತ್ರ ಬರೆದಿದ್ದರು. ಗಲಭೆಯಲ್ಲಿ ಭಾಗಿಯಾಗಿರುವವರಿಗೆ ಸ್ಥಳೀಯ ಶಾಸಕರ ರಕ್ಷಣೆ ಇರುವುದಾಗಿ ಗುಪ್ತಾ ಆರೋಪಿಸಿದ್ದರು. ಅದರ ಬೆನ್ನಲ್ಲೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿತ್ತು.

ತೆರವು ಕಾರ್ಯಾಚರಣೆಗಳಲ್ಲಿ ಬುಲ್ಡೋಜರ್‌ಗಳನ್ನು ಬಳಸಲಾಗಿದ್ದು, ಸುಪ್ರೀಂ ಕೋರ್ಟ್‌ ಆದೇಶ ತಲುಪಿದ ಕೂಡಲೇ ಕಾರ್ಯಾಚರಣೆ ನಿಲ್ಲಿಸಲಾಗುವುದು ಎಂದು ರಾಜಾ ಇಕ್ಬಾಲ್‌ ಸಿಂಗ್‌ ಹೇಳಿದ್ದಾರೆ.

'ಈಗಷ್ಟೇ ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ತಿಳಿದಿದ್ದು, ಆದೇಶವನ್ನು ಓದಿದ ಬಳಿಕ ಅದರಂತೆ ಕ್ರಮಕೈಗೊಳ್ಳಲಾಗುತ್ತದೆ' ಎಂದು ಎನ್‌ಡಿಎಂಸಿಯ ಕಮಿಷನರ್‌ ಸಂಜಯ್‌ ಗೋಯಲ್‌ ಪ್ರತಿಕ್ರಿಯಿಸಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟಿಸಿದೆ.

ಕಾರ್ಪೊರೇಷನ್‌ ನಡೆಸಿರುವ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. 'ಕಳೆದ 15 ವರ್ಷಗಳಿಂದ ನನ್ನ ಅಂಗಡಿಯು ಇಲ್ಲೇ ಇತ್ತು. ಅಕ್ರಮ ಕಟ್ಟಡದ ಬಗ್ಗೆ ಹಿಂದೆ ಯಾರೊಬ್ಬರೂ ಮಾತನಾಡಿರಲಿಲ್ಲ. ಎರಡು ಸಮುದಾಯಗಳ ನಡುವೆ ಹಿಂಸಾಚಾರ ನಡೆದ ನಂತರದಲ್ಲಿ ಇದು ನಡೆಯುತ್ತಿದೆ' ಎಂದು ಜಹಾಂಗಿರ್‌ಪುರಿಯ ಸ್ಥಳೀಯರೊಬ್ಬರು ಕಣ್ಣೀರಾದರು.

ತೆರವು ಕಾರ್ಯಾಚರಣೆಯ ಬಗ್ಗೆ ನಿವಾಸಿಗಳು ಮುಂಚಿತವಾಗಿ ತಿಳಿಸಿರಲಿಲ್ಲ ಹಾಗೂ ಕೆಲವು ಜನರು ಮನೆಯಲ್ಲೂ ಇರಲಿಲ್ಲ ಎಂದು ವಕೀಲರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಮಧ್ಯಾಹ್ನ 2ರವರೆಗೂ ಕಾರ್ಯಾಚರಣೆ ನಿಲ್ಲಿಸುವಂತೆ ಮತ್ತೊಂದು ಮನವಿ ಸಲ್ಲಿಸಲಾಗಿದೆ.

ಜಹಾಂಗಿರ್‌ಪುರಿಯಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಎಂಟು ಪೊಲೀಸರು ಸೇರಿದಂತೆ ಒಂಭತ್ತು ಮಂದಿ ಗಾಯಗೊಂಡಿದ್ದರು. ಪ್ರಕರಣದ ಸಂಬಂಧ ದೆಹಲಿ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿ ಒಟ್ಟು 23 ಜನರನ್ನು ಬಂಧಿಸಿದ್ದಾರೆ. ಮೊಹಮ್ಮದ್‌ ಅನ್ಸಾರ್‌ ಹಿಂಸಾಚಾರದ ಪ್ರಮುಖ ಪಿತೂರಿಗಾರ ಎಂದು ಆರೋಪಿಸಲಾಗಿದೆ. ಸೋನು ಎಂಬ ವ್ಯಕ್ತಿಯು ಘರ್ಷಣೆಯ ಸಮಯದಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಕೆಲವು ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಎಚ್‌ಪಿ ಮತ್ತು ಬಜರಂಗ ದಳದ ಮೆರವಣಿಗೆಯು ಅನುಮತಿಯಿಲ್ಲದೇ ಸಾಗಲು ಹೇಗೆ ಸಾಧ್ಯವಾಯಿತು, ಎರಡು ಪೊಲೀಸ್ ಜೀಪ್‌ಗಳೂ ಮೆರವಣಿಗೆಯಲ್ಲಿ ಜೊತೆಗಿರಲು ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಸ್ಥಳೀಯರಪ್ರಕಾರ, ಮೂರು ಮೆರವಣಿಗೆಗಳು ನಡೆದಿವೆ. ಈ ಪೈಕಿ ವಿಎಚ್‌ಪಿ ಹಾಗೂ ಬಜರಂಗದಳ ಮೂರನೇ ಮೆರವಣಿಗೆಯನ್ನು ಆಯೋಜಿಸಿದ್ದವು.

‘ಮೂರನೇ ಮೆರವಣಿಗೆಯು ಮಸೀದಿಯ ಸಮೀಪ ಸಾಗಿ ಬಂದಾಗ, ಕೆಲವು ಸದಸ್ಯರು ಮೆರವಣಿಗೆಯನ್ನು ತಡೆದರು. ಆ ಸಮಯದಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಮೆರವಣಿಗೆಯಲ್ಲಿ ಮೈಕ್‌ನಲ್ಲಿ ಹಾಕಲಾಗಿದ್ದ ಹಾಡಿನ ಧ್ವನಿಯನ್ನು ಹೆಚ್ಚಿಸಲಾಯಿತು’ ಎಂದು ಸ್ಥಳೀಯರು ಹೇಳಿದ್ದಾರೆ. ಮಸೀದಿಯ ಗೋಡೆಯ ಮೇಲೆ ಧ್ವಜ ಹಾರಿಸಲು ಯತ್ನ ನಡೆಯಿತು ಎಂದು ಸ್ಥಳೀಯರು ಹೇಳಿದ್ದರೂ, ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನ ಅವರು ಇದನ್ನು ಅಲ್ಲಗಳೆದಿದ್ದಾರೆ.

ಹಿಂಸಾಚಾರ ನಡೆದಿದ್ದ ಜಹಾಂಗಿರ್‌ಪುರಿಯಲ್ಲಿ ಸೋಮವಾರ ಮತ್ತೆ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಬಹುತೇಕ ಅಂಗಡಿಗಳನ್ನು ಮುಚ್ಚಲಾಗಿತ್ತು. ಅಲ್ಲಲ್ಲಿ ಕೆಲವು ಸ್ಥಳೀಯರು ಕಂಡುಬಂದಿದ್ದನ್ನು ಹೊರತುಪಡಿಸಿದರೆ, ಭಾರಿ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಇಡೀ ಪ್ರದೇಶವನ್ನು ಗಸ್ತು ತಿರುಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT