ಹೈದರಾಬಾದ್: ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರಿಸಿರುವ ತೆಲಂಗಾಣ ಸರ್ಕಾರ, ನಗರದ ಐಟಿ ಕಾರಿಡಾರ್‌ನಲ್ಲಿರುವ ದುರ್ಗಮ್ ಚೆರುವು ಕೆರೆಯಲ್ಲಿ ಮತ್ತು ಸುತ್ತಮುತ್ತ ನಿರ್ಮಿಸಲಾಗಿರುವ ಕನಿಷ್ಠ 204 ಕಟ್ಟಡಗಳ ತೆರವಿಗಾಗಿ ನೋಟಿಸ್ ಜಾರಿ ಮಾಡಿದೆ.
ಮಾಧಪುರದಲ್ಲಿರುವ ಐಟಿ ಕಾರಿಡಾರ್‌ನ ಅಮರ ಸೊಸೈಟಿಯಲ್ಲಿರುವ, ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಸಹೋದರ ಎ.ತಿರುಪತಿ ರೆಡ್ಡಿ ಅವರಿಗೆ ಸೇರಿದ ಕಟ್ಟಡಕ್ಕೆ ಸಂಬಂಧಿಸಿಯೂ ನೋಟಿಸ್ ನೀಡಲಾಗಿದೆ.
30 ದಿನಗಳ ಒಳಗಾಗಿ ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ರಂಗಾರೆಡ್ಡಿ ಜಿಲ್ಲೆಯ ಕಂದಾಯ ಅಧಿಕಾರಿಗಳು ಮತ್ತು ಸೆರಿಲಿಂಗಂಪಲ್ಲಿ ತಾಲ್ಲೂಕು ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಈ ಕೆರೆಯು, ಹೈದರಾಬಾದ್‌ನ ಪಶ್ಚಿಮ ಭಾಗದಲ್ಲಿರುವ ಪ್ರಮುಖ ತಾಣವಾಗಿದೆ. ಕಳೆದ ಕೆಲ ವರ್ಷಗಳಿಂದೀಚೆಗೆ, ಈ ಕೆರೆಯಂಗಳದಲ್ಲಿ ಹಾಗೂ ಸುತ್ತಮುತ್ತ ಸಾಕಷ್ಟು ಅಭಿವೃದ್ಧಿ ಚಟುವಟಿಕೆಗಳು ಕಂಡುಬಂದಿವೆ. ಅನೇಕ ವಸತಿ ಪ್ರದೇಶಗಳು ನಿರ್ಮಾಣವಾಗಿವೆ.
ಜುಬಿಲಿ ಹಿಲ್ಸ್ ಮತ್ತು ಫೈನಾನ್ಶಿಯಲ್ ಸಿಟಿ ಸಂಪರ್ಕಿಸುವ ಕೇಬಲ್ ಸೇತುವೆಯನ್ನು ಕೂಡ ದುರ್ಗಮ್ ಚೆರುವು ಕೆರೆಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ಕೆರೆ ಸುತ್ತಮುತ್ತ ಇರುವ ನೆಕ್ಟರ್ಸ್ ಕಾಲೊನಿ, ಡಾಕ್ಟರ್ಸ್ ಕಾಲೊನಿ, ಕಾವೂರಿ ಹಿಲ್ಸ್ ಮತ್ತು ಅಮರ ಸೊಸೈಟಿಯಲ್ಲಿರುವ ಕನಿಷ್ಠ 204 ಕಟ್ಟಡಗಳ ತೆರವಿಗೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ.
ಅಕ್ರಮ ಕಟ್ಟಡಗಳ ತೆರವಿಗೆ ಸಂಬಂಧಿಸಿ, ಆಗಸ್ಟ್ ಮೊದಲ ವಾರದಲ್ಲಿಯೇ ನೋಟಿಸ್ ಜಾರಿ ಮಾಡಲಾಗಿದ್ದರೂ, ಗುರುವಾರ ಈ ವಿಷಯ ಬಹಿರಂಗಗೊಂಡಿದೆ. ನಿಗದಿತ ಗಡುವಿನ ಒಳಗಾಗಿ ತೆರವುಗೊಳಿಸದಿದ್ದಲ್ಲಿ, ಕಟ್ಟಡಗಳನ್ನು ನೆಲಸಮಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಕೆರೆ ಸುತ್ತಮುತ್ತ ಹಲವು ಗಣ್ಯ ವ್ಯಕ್ತಿಗಳು ಹಾಗೂ ಸೆಲೆಬ್ರಿಟಿಗಳಿಗೆ ಸೇರಿದ ಕಟ್ಟಡಗಳಿವೆ. ತೆಲುಗಿನ ಜನಪ್ರಿಯ ನಟ ಅಕ್ಕಿನೇನಿ ನಾಗಾರ್ಜುನ ಒಡೆತನದ ಎನ್–ಕನ್ವೆಷನ್ ಎಂಬ ಸಭಾಂಗಣವನ್ನು ಇತ್ತೀಚೆಗೆ ನೆಲಸಮಗೊಳಿಸಲಾಗಿದೆ.
ತಿರುಪತಿ ರೆಡ್ಡಿ ಪ್ರತಿಕ್ರಿಯೆ
ಕಟ್ಟಡ ತೆರವಿಗೆ ಸಂಬಂಧಿಸಿ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಉತ್ತರ ನೀಡಿರುವ ಎ.ತಿರುಪತಿ ರೆಡ್ಡಿ‘ಅಮರ ಸೊಸೈಟಿಯಲ್ಲಿ ನಾನು ವಾಸವಾಗಿರುವ ಮನೆಯನ್ನು 2015ರಲ್ಲಿ ಖರೀದಿಸಿದ್ದೇನೆ. ಈ ಮನೆ ದುರ್ಗಮ್ ಚೆರುವು ಕೆರೆ ವ್ಯಾಪ್ತಿ ವಲಯದಲ್ಲಿ ಬರುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ’ ಎಂದು ಹೇಳಿದ್ದಾರೆ. ‘ನನ್ನ ಮನೆಯು ಕೆರೆಗೆ ಸೇರಿದ ಪ್ರದೇಶ ವ್ಯಾಪ್ತಿಯಲ್ಲಿದೆ ಎಂಬುದನ್ನು ಸರ್ಕಾರ ಗುರುತಿಸಿ ಅಕ್ರಮ ತೆರವು ಕಾರ್ಯಾಚರಣೆ ಭಾಗವಾಗಿ ಕೈಗೊಳ್ಳುವ ಯಾವುದೇ ಕ್ರಮಕ್ಕೆ ನನ್ನ ಆಕ್ಷೇಪವಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.