ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಂಕೆ ನಾಯಕನ ‘ಆಕ್ಷೇಪಾರ್ಹ’ ಹೇಳಿಕೆ: ಲೋಕಸಭೆಯಲ್ಲಿ ಮಾತಿನ ಸಮರ

Published 6 ಫೆಬ್ರುವರಿ 2024, 14:06 IST
Last Updated 6 ಫೆಬ್ರುವರಿ 2024, 14:06 IST
ಅಕ್ಷರ ಗಾತ್ರ

ನವದೆಹಲಿ: ಡಿಎಂಕೆ ಸಂಸದ ಟಿ.ಆರ್‌.ಬಾಲು ಅವರು ಕೇಂದ್ರ ಸಚಿವ ಎಲ್‌.ಮುರುಗನ್‌ ವಿರುದ್ಧ ನೀಡಿದ ಹೇಳಿಕೆಯು ಲೋಕಸಭೆಯಲ್ಲಿ ಮಂಗಳವಾರ ಬಿಜೆಪಿ ಹಾಗೂ ಡಿಎಂಕೆ ನಡುವೆ ಮಾತಿನ ಸಮರಕ್ಕೆ ಕಾರಣವಾಯಿತು.

ಕೇಂದ್ರ ಸರ್ಕಾರವು ತಮಿಳುನಾಡಿಗೆ ನೀಡಿದ ಪ್ರವಾಹ ಪರಿಹಾರ ಮೊತ್ತಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಈ ಬೆಳವಣಿಗೆ ನಡೆದಿದೆ. 

ಡಿಎಂಕೆಯ ಇಬ್ಬರು ಸಂಸದರು ಈ ವಿಷಯದ ಕುರಿತು ಪ್ರಶ್ನೆ ಕೇಳಿದ ಬೆನ್ನಲ್ಲೇ, ಬಾಲು ಅವರು ಪೂರಕ ಪ್ರಶ್ನೆಯೊಂದನ್ನು ಮುಂದಿಟ್ಟರು. ಕೇಂದ್ರ ಪಶು ಸಂಗೋಪನಾ ಮತ್ತು ಮೀನುಗಾರಿಕೆ ರಾಜ್ಯ ಖಾತೆ ಸಚಿವ ಮುರುಗನ್‌ ಅವರು ಈ ವೇಳೆ ಮಧ್ಯಪ್ರವೇಶಿಸಿ, ಡಿಎಂಕೆ ನಾಯಕ ‘ಅಪ್ರಸ್ತುತ’ ಪ್ರಶ್ನೆ ಕೇಳುತ್ತಿದ್ದಾರೆ ಎಂದರು.

ಇದರಿಂದ ಆಕ್ರೋಶಿತರಾದ ಬಾಲು, ‘ಆಕ್ಷೇಪಾರ್ಹ’ ಪದ ಬಳಸಿ ಮುರುಗನ್‌ ವಿರುದ್ಧ ಹರಿಹಾಯ್ದರು. ಈ ವೇಳೆ ಬಿಜೆಪಿ ಮತ್ತು ಡಿಎಂಕೆ ಸಂಸದರ ನಡುವೆ ಮಾತಿನ ಚಕಮಕಿ ನಡೆದು, ಗದ್ದಲ ಉಂಟಾಯಿತು. ಬಾಲು ಹೇಳಿಕೆ ಖಂಡಿಸಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದರು. ದಲಿತ ನಾಯಕನನ್ನು ಅವಮಾನಿಸಿದ್ದಕ್ಕೆ ಕ್ಷಮೆಯಾಚಿಸುವಂತೆ ಬಾಲು ಅವರನ್ನು ಒತ್ತಾಯಿಸಿದರು. 

ಆದರೆ ಕ್ಷಮೆಯಾಚಿಸಲು ನಿರಾಕರಿಸಿದ ಬಾಲು, ತಮ್ಮ ಮಾತುಗಳನ್ನು ಪುನರುಚ್ಚರಿಸಿದರು. ಈ ವೇಳೆ, ಸ್ಪೀಕರ್‌ ಓಂ ಬಿರ್ಲಾ ಅವರು ಆಕ್ಷೇಪಾರ್ಹ ಪದವನ್ನು ಕಡತದಿಂದ ತೆಗೆಸಿದರು. ಇದರ ಬೆನ್ನಲ್ಲೇ ಡಿಎಂಕೆ, ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.

‘ಅಸಾಂವಿಧಾನಿಕ ಪದ ಬಳಸಿಲ್ಲ’ ಸದನದ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಬಾಲು ‘ಸಂಸತ್ತಿನಲ್ಲಿ ತಮಿಳುನಾಡಿನ ಹಿತಾಸಕ್ತಿಗೆ ವಿರುದ್ಧವಾಗಿ ಮಾತನಾಡಿರುವ ಮುರುಗನ್‌ ಒಬ್ಬ ದ್ರೋಹಿ’ ಎಂದು ದೂರಿದರು. ‘ಮುರುಗನ್‌ ಅವರು ಸಂಸದ ಮತ್ತು ಸಚಿವರಾಗಲು ಅನರ್ಹ ಎಂದು ಹೇಳಿದ್ದೇನೆ. ನಾನು ಬಳಸಿರುವ ‘ಅನರ್ಹ’ ಎಂಬ ಪದ ಅಸಾಂವಿಧಾನಿಕ ಅಲ್ಲ’ ಎಂದಿದ್ದಾರೆ. ಬಾಲು ಅವರು ಮುರುಗನ್‌ ಅವರ ಸಾಮಾಜಿಕ ಹಿನ್ನೆಲೆ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಡಿಎಂಕೆಯ ಇನ್ನೊಬ್ಬ ನಾಯಕ ಎ.ರಾಜಾ ಹೇಳಿದರು. ‘ಅಪ್ರಸ್ತುತ ಪ್ರಶ್ನೆ ಕೇಳಬೇಡಿ ಎಂದಿದ್ದಕ್ಕೆ ಮುರುಗನ್‌ ಅವರನ್ನು ‘ಅನರ್ಹ’ ಎಂದಿರುವುದು ದಲಿತ ಸಚಿವರಿಗೆ ಮಾಡಿದ ಅವಮಾನ’ ಎಂದು ಸಚಿವ ಅರ್ಜುನ್ ರಾಮ್ ಮೇಘವಾಲ್ ಪ್ರತಿಕ್ರಿಯಿಸಿದರು.

ತಾರತಮ್ಯ ತೋರಿಲ್ಲ: ಸಚಿವ ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ವಿಕೋಪ ಪರಿಹಾರ ನಿಧಿ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಎಸಗಿದೆ ಎಂಬ ಆರೋಪವನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಅಲ್ಲಗಳೆದಿದ್ದಾರೆ. ಪರಿಹಾರ ಹಂಚಿಕೆಯಲ್ಲಿ ತಮಿಳುನಾಡಿಗೆ ಅನ್ಯಾಯ ಮಾಡಲಾಗಿದೆ ಎಂಬ ಡಿಎಂಕೆ ಸಂಸದರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು ‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳ ಅಗತ್ಯತೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ ಹಾಗೂ ಕೇಂದ್ರ ಸರ್ಕಾರವು ಎಲ್ಲ ರೀತಿಯ ನೆರವು ಒದಗಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT