ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಭಾರತವನ್ನು ‘ಗೋಮೂತ್ರ ರಾಜ್ಯಗಳು’ ಎಂದ ಡಿಎಂಕೆ ಸಂಸದ; ವಿವಾದ

ಸನಾತನ ಧರ್ಮ ನಿರ್ಮೂಲನೆ ಹೇಳಿಕೆ ಬಳಿಕ ಮತ್ತೊಂದು ಯಡವಟ್ಟು
Published 5 ಡಿಸೆಂಬರ್ 2023, 16:46 IST
Last Updated 5 ಡಿಸೆಂಬರ್ 2023, 16:46 IST
ಅಕ್ಷರ ಗಾತ್ರ

ನವದೆಹಲಿ: ಹಿಂದಿ ಭಾಷಿಕ ಪ್ರದೇಶಗಳನ್ನು ‘ಗೋಮೂತ್ರ ರಾಜ್ಯಗಳು’ ಎಂದು ಲೋಕಸಭೆಯಲ್ಲಿ ಕರೆಯುವ ಮೂಲಕ ಡಿಎಂಕೆ ಸಂಸದ ಡಿ.ಎನ್‌.ವಿ. ಸೆಂಥಿಲ್‌ ಕುಮಾರ್‌ ಅವರು ವಿವಾದಕ್ಕೆ ಕಿಡಿ ಹೊತ್ತಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಸೆಂಥಿಲ್‌ ಕುಮಾರ್‌ ಅವರು, ‘ಹಿಂದಿ ಭಾಷಿಕ ಪ್ರದೇಶದಲ್ಲಿ ಮಾತ್ರ ಗೆಲ್ಲುವ ಶಕ್ತಿ ಬಿಜೆಪಿಗೆ ಇದೆ ಎಂದು ದೇಶದ ಜನರು ಅರಿತುಕೊಳ್ಳಬೇಕು. ನಾವು ಆ ಪ್ರದೇಶವನ್ನು ಗೋಮೂತ್ರ ರಾಜ್ಯಗಳು ಎಂದು ಕರೆಯುತ್ತೇವೆ’ ಎಂದರು.

‘ತಮಿಳುನಾಡು, ಕರ್ನಾಟಕ, ತೆಲಂಗಾಣ, ಕೇರಳ, ಆಂಧ್ರಪ್ರದೇಶದ ಚುನಾವಣಾ ಫಲಿತಾಂಶ ಗಮನಿಸಿದ್ದೀರಲ್ಲವೇ. ನಿಮಗೆ (ಬಿಜೆಪಿ) ದಕ್ಷಿಣ ಭಾರತಕ್ಕೆ ಬರಲು ಸಾಧ್ಯವಿಲ್ಲ. ಅಲ್ಲಿ ನಾವೇ ಬಲಿಷ್ಠರು’ ಎಂದರು.

ಮಾತನ್ನು ಮುಂದುವರೆಸಿದ ಅವರು, ‘ದಕ್ಷಿಣ ಭಾರತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆ. ಹಿಂಬಾಗಿಲ ಮೂಲಕ ನಿಯಂತ್ರಣ ಸಾಧಿಸಲು ದಕ್ಷಿಣ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾರ್ಪಾಡು ಮಾಡುವ ಆಯ್ಕೆ ನಿಮ್ಮ ಮುಂದಿದ್ದರೆ ಅದರಲ್ಲಿ ನಮಗೆ ಆಶ್ಚರ್ಯವಿಲ್ಲ’ ಎಂದರು. 

ಬಿಜೆಪಿ ತಿರುಗೇಟು: ಡಿಎಂಕೆ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷದ ಸಂಸದರೊಬ್ಬರು ಉತ್ತರ ಭಾರತವನ್ನು ಹೀಯಾಳಿಸಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸಮ್ಮತಿ ಇದೆಯೇ ಎಂದು ಪ್ರಶ್ನಿಸಿದೆ.

ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಈ ಹೇಳಿಕೆ ವಿರೋಧಿಸಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಉತ್ತರ ಭಾರತೀಯರನ್ನು ಪಾನಿಪೂರಿ ಮಾರಾಟಗಾರರು, ಶೌಚಾಲಯ ನಿರ್ಮಿಸುವವರು ಎಂದು ಕರೆದ ಡಿಎಂಕೆ, ಈಗ ಗೋಮೂತ್ರದ ಉದಾಹರಣೆ ಮೂಲಕ ಅವರನ್ನು ಅವಮಾನಿಸಿದೆ’ ಎಂದಿದ್ದಾರೆ.

ಡಿಎಂಕೆಯ ದುರಾಡಳಿತದಿಂದ ಚೆನ್ನೈ ಮುಳುಗುತ್ತಿದೆ. ಸಂಸತ್ತಿನಲ್ಲಿ ಅವರ ಚರ್ಚೆಗಳಿಗೂ ಅದೇ ಗತಿಯಾಗುತ್ತಿದೆ. ಡಿಎಂಕೆಯ ಈ ಅಸೂಕ್ಷ್ಮ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ.
ಕೆ. ಅಣ್ಣಾಮಲೈ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ

‘ದೇಶದ ಹೃದಯಭಾಗದ ಭಾರತೀಯರನ್ನು ಡಿಎಂಕೆ ಅವಮಾನಿಸಿದ್ದನ್ನು ರಾಹುಲ್‌ ಗಾಂಧಿ ಒಪ್ಪಿಕೊಳ್ಳುತ್ತಾರಾ? ಭಾರತೀಯರನ್ನು ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳು ಇನ್ನೆಷ್ಟು ಕಾಲ ಅವಮಾನಿಸುತ್ತವೆ?’ ಎಂದು ಕರ್ನಾಟಕದ ಬಿಜೆಪಿ ನಾಯಕ ಸಿ.ಟಿ. ರವಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂದು ಡಿಎಂಕೆ ನಾಯಕ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪಕ್ಷದ ಇತರ ಸದಸ್ಯರೂ ಧ್ವನಿಗೂಡಿಸಿದ್ದರು. ಕಳೆದ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ಈ ಹೇಳಿಕೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಅದಾದ ಬೆನ್ನಲ್ಲೇ ಡಿಎಂಕೆ ಮತ್ತೊಂದು ವಿವಾದ ಹುಟ್ಟುಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT