ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಮುಂದುವರಿದ ಸಿಬಿಐ ವಿಚಾರಣೆ

Published : 19 ಆಗಸ್ಟ್ 2024, 15:39 IST
Last Updated : 19 ಆಗಸ್ಟ್ 2024, 15:39 IST
ಫಾಲೋ ಮಾಡಿ
Comments

ಕೋಲ್ಕತ್ತ: ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಚಾರ್ಯ ಸಂದೀಪ್‌ ಘೋಷ್ ಅವರನ್ನು ಸಿಬಿಐ ಅಧಿಕಾರಿಗಳು ಸತತ ನಾಲ್ಕನೇ ದಿನವೂ ವಿಚಾರಣೆಗೆ ಒಳಪಡಿಸಿದರು.

ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ, ಶುಕ್ರವಾರದಿಂದ ಹಲವು ಗಂಟೆಗಳ ಕಾಲ ಘೋಷ್‌ ಅವರ ವಿಚಾರಣೆ ನಡೆಸಿದ್ದಾರೆ. ಸೋಮವಾರ ಬೆಳಿಗ್ಗೆ ಸಿಬಿಐ ಕಚೇರಿಗೆ ಹಾಜರಾದ ಅವರು ಹಲವು ಪ್ರಶ್ನೆಗಳನ್ನು ಎದುರಿಸಿದರು.

ಆರ್‌.ಜಿ.ಕರ್‌ ಆಸ್ಪತ್ರೆಯ ಸೆಮಿನಾರ್‌ ಹಾಲ್‌ನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ಆಗಸ್ಟ್‌ 9ರಂದು ಪತ್ತೆಯಾಗಿತ್ತು. ಅದಾದ ಎರಡು ದಿನಗಳ ಬಳಿಕ ಘೋಷ್‌ ಅವರು ಪ್ರಾಚಾರ್ಯರ ಹುದ್ದೆಗೆ ರಾಜೀನಾಮೆ ನೀಡಿದ್ದರು. ಘೋಷ್‌ ಮಾಡಿರುವ ದೂರವಾಣಿ ಕರೆಗಳು ಮತ್ತು ವಾಟ್ಸ್ಆ್ಯಪ್ ಚಾಟ್‌ ಕುರಿತು ತನಿಖಾಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.

ಹೈಕೋರ್ಟ್‌ ಮೊರೆ ಹೋದ ಟಿಎಂಸಿ ಸಂಸದ: ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಘಟನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮನ್ಸ್‌ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಟಿಎಂಸಿ ಸಂಸದ ಸುಖೇಂದು ಶೇಖರ್‌ ರಾಯ್‌ ಅವರು ಕಲ್ಕತ್ತ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ರಾಯ್‌ ಅವರಿಗೆ ಭಾನುವಾರ ನೋಟಿಸ್‌ ಜಾರಿಗೊಳಿಸಿದ್ದ ಕೋಲ್ಕತ್ತ ಪೊಲೀಸರು, ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಿದ್ದರು.

ನೋಟಿಸ್‌ ಅನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ರಾಯ್‌ ಅವರ ವಕೀಲರಿಗೆ ನ್ಯಾಯಮೂರ್ತಿಗಳಾದ ರಾಜರ್ಷಿ ಭಾರದ್ವಾಜ್‌ ಅವರು ಸೋಮವಾರ ಅನುಮತಿ ನೀಡಿದರು. ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತ ಪೊಲೀಸ್‌ ಕಮಿಷನರ್‌ ಹಾಗೂ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಚಾರ್ಯ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ರಾಯ್ ಅವರು ಆಗ್ರಹಿಸಿದ್ದರು.

ಪ್ರಮುಖ ಬೆಳವಣಿಗೆಗಳು

  • ಅತ್ಯಾಚಾರ ಘಟನೆ ಖಂಡಿಸಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸೋಮವಾರ ಪಾಲ್ಗೊಂಡರು. 

  • ‘ಆಸ್ಪತ್ರೆಯಲ್ಲಿ ನಡೆದಿರುವುದು ಘೋರ ಘಟನೆ. ಆದ್ದರಿಂದ ಪ್ರತಿಭಟಿಸಲು ಬೀದಿಗಿಳಿದಿದ್ದೇನೆ’ ಎಂದು 1964ರ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಯೊಬ್ಬರು ಹೇಳಿದರು.

  • ಅತ್ಯಾಚಾರ ಮತ್ತು ಕೊಲೆ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹರಡಿದ ಆರೋಪ ಎದುರಿಸುತ್ತಿರುವ ಹಿರಿಯ ವೈದ್ಯರಾದ ಕುನಾಲ್‌ ಸರ್ಕಾರ್‌ ಮತ್ತು ಸುವರ್ಣ ಗೋಸ್ವಾಮಿ ಅವರು ಪೊಲೀಸ್‌ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ಸೋಮವಾರ ಹಾಜರಾದರು.

  • ಕುನಾಲ್‌ ಮತ್ತು ಗೋಸ್ವಾಮಿ ಅವರು ಇತರ ವೈದ್ಯರ ಜತೆ ಮೆರವಣಿಗೆಯಲ್ಲಿ ಪೊಲೀಸ್‌ ಕೇಂದ್ರ ಕಚೇರಿಗೆ ತೆರಳಿದರು.

  • ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

  • ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರತ್ತ ಬೆರಳು ತೋರಿಸಿ ರಾಜೀನಾಮೆಗೆ ಆಗ್ರಹಿಸುತ್ತಿರುವವರ ಬೆರಳು ಕತ್ತರಿಸಬೇಕು ಎಂದು ಟಿಎಂಸಿ ಮುಖಂಡರೂ ಆಗಿರುವ ಸಚಿವ ಉದಯನ್‌ ಗುಹಾ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.

  • ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಕಲ್ಕತ್ತ ಹೈಕೋರ್ಟ್‌ನ ವಕೀಲರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು

ಗುರುತು ಬಹಿರಂಗ: ಒಬ್ಬನ ಬಂಧನ

ಸಂತ್ರಸ್ತೆಯ ಗುರುತನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪೊಲೀಸರು ಸೋಮವಾರ ಕೋಲ್ಕತ್ತದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ತಲ್ತಲಾ ಪೊಲೀಸ್‌ ಠಾಣೆಯಲ್ಲಿ ದಾಖಲಾದ ದೂರನ್ನು ಆಧರಿಸಿ ಬಂಧನ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. 

‘ಇನ್‌ಸ್ಟಾಗ್ರಾಂನಲ್ಲಿ ‘Kirtisocial’ ಎಂಬ ಹೆಸರಿನ ಖಾತೆ ಹೊಂದಿರುವ ವ್ಯಕ್ತಿಯು ಘಟನೆಗೆ ಸಂಬಂಧಿಸಿದ ಕೆಲವು ವಿವರಗಳನ್ನು ಪೋಸ್ಟ್‌ ಮಾಡಿದ್ದರು. ಅದರಲ್ಲಿ ಸಂತ್ರಸ್ತೆಯ ಚಿತ್ರವನ್ನೂ ಹಾಕಲಾಗಿತ್ತು. ಈ ಬಗ್ಗೆ ನಮಗೆ ದೂರು ಬಂದಿತ್ತು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT