ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ: ಕೋರ್ಟ್‌ಗೆ ತನಿಖಾ ಪ್ರಗತಿ ವರದಿ ಸಲ್ಲಿಸಿದ ಸಿಬಿಐ

Published : 9 ಸೆಪ್ಟೆಂಬರ್ 2024, 6:10 IST
Last Updated : 9 ಸೆಪ್ಟೆಂಬರ್ 2024, 6:10 IST
ಫಾಲೋ ಮಾಡಿ
Comments

ನವದೆಹಲಿ: ಕೋಲ್ಕತ್ತದ ಸರ್ಕಾರಿ ಆರ್‌.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು (ಸೋಮವಾರ) ಸುಪ್ರೀಂ ಕೋರ್ಟ್‌ಗೆ ತನಿಖಾ ಪ್ರಗತಿ ವರದಿ ಸಲ್ಲಿಸಿದೆ ಎಂದು ವರದಿಯಾಗಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆಯನ್ನು ಪುನರಾರಂಭಿಸಿದೆ.

ಮುಂದಿನ ಮಂಗಳವಾರದೊಳಗೆ ಹೊಸ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಸಿಬಿಐ ಅಧಿಕಾರಿಗಳಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ. ಜತೆಗೆ, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ.

ಇತ್ತ ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಯು ಕೂಡ ಸುಪ್ರೀಂ ಕೋರ್ಟ್‌ಗೆ ವರದಿಯನ್ನು ಸಲ್ಲಿಸಿದ್ದು, ವೈದ್ಯರ ಮುಷ್ಕರ ಮತ್ತು ಪ್ರತಿಭಟನೆಗಳಲ್ಲಿ 23 ಜನರು ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿದೆ.

ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ವಿಚಾರಣೆ ಮುಂದೂಡಲಾಗಿತ್ತು.

ಆಗಸ್ಟ್‌ 9ರಂದು ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಲಾಗಿತ್ತು. ಘಟನೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಆಕ್ರೋಶ ಭುಗಿಲೆದ್ದಿತ್ತು.

ಪೊಲೀಸ್ ತನಿಖೆ ಬಗ್ಗೆ ಸಂತ್ರಸ್ತೆಯ ಪೋಷಕರು ಬೇಸರ: ಅಧಿಕಾರಿಗಳು ಪ್ರಕರಣದ ತನಿಖೆ ನಿರ್ವಹಿಸಿದ ರೀತಿಗೆ ಬೇಸರ ತರಿಸಿದೆ. ನ್ಯಾಯಕ್ಕಾಗಿ ನಮ್ಮ ಕುಟುಂಬಕ್ಕೆ ಅಗತ್ಯ ಬೆಂಬಲವನ್ನು ಒದಗಿಸಲು ಸರ್ಕಾರ, ಪೊಲೀಸರು ವಿಫಲರಾಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಅಸಮಾಧಾನ ಹೊರಹಾಕಿದ್ದಾರೆ.

‘ಪೊಲೀಸರು ಆರಂಭದಿಂದಲೇ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು. ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುವಾಗಲೂ ಮೃತದೇಹವನ್ನು ನೋಡಲು ನಮಗೆ ಅವಕಾಶ ನೀಡಲಿಲ್ಲ. ನಾವು ಪೊಲೀಸ್ ಠಾಣೆಯಲ್ಲಿ ಕಾಯಬೇಕಾಗಿತ್ತು. ಮೃತದೇಹವನ್ನು ನಮಗೆ ಹಸ್ತಾಂತರಿಸುವಾಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಲಂಚದ ಆಮಿಷ ಒಡ್ಡಿದರು. ಆದರೆ ನಾವು ಅದನ್ನು ನಿರಾಕರಿಸಿದೆವು’ ಎಂದು ಸಂತ್ರಸ್ತೆಯ ತಂದೆ ಅಳಲು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT