ಕೋಲ್ಕತ್ತ: ನಗರದ ಸರ್ಕಾರಿ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಸಿಬಿಐ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.
ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್ ಘೋಷ್ ಅವರನ್ನು ಕಳೆದ 17 ದಿನಗಳಿಂದ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಘೋಷ್ ಅವರನ್ನು ಒಟ್ಟು 160 ತಾಸಿಗೂ ಹೆಚ್ಚು ಕಾಲ ವಿಚಾರಣೆಗೆ ಗುರಿಪಡಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಘೋಷ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Kolkata, West Bengal | Former Principal of RG Kar Medical College Sandip Ghosh taken to CBI Anti Corruption Branch from CBI special crime branch office. More details awaited
— ANI (@ANI) September 2, 2024
ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಘೋಷ್ ಅವರು ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರ ಕುರಿತು ಆಸ್ಪತ್ರೆಯ ಮಾಜಿ ಸೂಪರಿಂಟೆಂಡೆಂಟ್ ಡಾ.ಅಖ್ತರ್ ಅಲಿ ಸಿಬಿಐಗೆ ದೂರು ನೀಡಿದ್ದರು.
ಸಂದೀಪ್ ಘೋಷ್ ಅವರು 2021ರ ಫೆಬ್ರುವರಿಯಿಂದ 2023ರ ಸೆಪ್ಟೆಂಬರ್‌ವರೆಗೆ ಈ ಸಂಸ್ಥೆಯ ಪ್ರಾಂಶುಪಾಲರಾಗಿದ್ದರು. ಅಕ್ಟೋಬರ್‌ನಲ್ಲಿ ಅವರ ವರ್ಗ ಆಗಿತ್ತು. ಆದರೆ, ಒಂದೇ ತಿಂಗಳಲ್ಲಿ ಅವರು ಮತ್ತೆ ಅದೇ ಹುದ್ದೆಗೆ ಮರಳಿದ್ದರು. ವೈದ್ಯ ವಿದ್ಯಾರ್ಥಿನಿಯ ಹತ್ಯೆ ನಡೆಯುವ ದಿನದವರೆಗೂ ಅವರು ಅದೇ ಹುದ್ದೆಯಲ್ಲಿದ್ದರು.
ಆಗಸ್ಟ್ 9ರಂದು ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಮಾಡಲಾಗಿತ್ತು. ಘಟನೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಆಕ್ರೋಶ ಭುಗಿಲೆದ್ದಿತ್ತು.
ಸಂದೀಪ್ ಘೋಷ್ ಅವರನ್ನು ಭಾರತೀಯ ವೈದ್ಯಕೀಯ ಸಂಸ್ಥೆಯು (ಐಎಂಎ) ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.