ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಮತ್ತೆ ಕಟ್ಟಲು ತಿಂಗಳ ವೇತನ ದೇಣಿಗೆ ಕೊಡಿ

ಮಲೆಯಾಳಿಗರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮನವಿ
Last Updated 27 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ತಿರುವನಂತಪುರ: ಭೀಕರ ಪ್ರವಾಹದಿಂದ ತತ್ತರಿಸಿರುವ ಕೇರಳ ರಾಜ್ಯ ಮರು ನಿರ್ಮಿಸಲು ವಿಶ್ವದಾದ್ಯಂತ ಇರುವ ಮಲೆಯಾಳಿಗಳು ಒಂದು ತಿಂಗಳ ವೇತನ ದೇಣಿಗೆ ನೀಡಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮನವಿ ಮಾಡಿದ್ದಾರೆ.

ಟಿ.ವಿ ಕಾರ್ಯಕ್ರಮವೊಂದರಲ್ಲಿ ಮಲೆಯಾಳಿಗರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ‘ಉದ್ಯೋಗಿಗಳು ಒಂದು ತಿಂಗಳ ವೇತನವನ್ನು ಒಂದೇ ಕಂತಿನಲ್ಲಿ ನೀಡಬೇಕಿಲ್ಲ, ಪ್ರತಿ ತಿಂಗಳು ಮೂರು ದಿನದ ವೇತನದಂತೆ ಒಟ್ಟು 10 ಕಂತುಗಳಾಗಿಯೂ ದೇಣಿಗೆ ಕೊಡಬಹುದು’ ಎಂದು ತಿಳಿಸಿದರು.

ರಾಜ್ಯ ಪುನರ್‌ ನಿರ್ಮಾಣದಲ್ಲಿ ಕೈಜೋಡಿಸುವಂತೆ ಕೇರಳಿಗರಿಗೆ ಅವರು ಸಾಮಾಜಿಕ ಜಾಲ ತಾಣಗಳಲ್ಲೂ ಮನವಿ ಮಾಡಿದ್ದಾರೆ.

ರಾಜ್ಯಪಾಲ ಪಿ.ಸಿತಾಶಿವಂ, ರಾಜ್ಯ ಪೊಲೀಸ್‌ ಮುಖ್ಯಸ್ಥ ಲೋಕನಾಥ್‌ ಬೆಹೆರಾ, ಕಾಂಗ್ರೆಸ್‌ ಶಾಸಕ ತಿರುವಾಂಕೂರ್‌ ರಾಧಾಕೃಷ್ಣನ್‌, ಕೊಚ್ಚಿ ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎ.ಪಿ.ಎಂ.ಮೊಹಮದ್‌ ಹನೀಶ್‌ ಅವರು ತಮ್ಮ ಒಂದು ತಿಂಗಳ ವೇತನವನ್ನು ಸೋಮವಾರ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದರು.

ರಾಜ್ಯಪಾಲರು ಆಗಸ್ಟ್‌ 14ರಂದು ₹1 ಲಕ್ಷವನ್ನು ಪರಿಹಾರ ನಿಧಿಗೆ ನೀಡಿದ್ದರು. ಬಾಕಿ ಮೊತ್ತ ₹2.5 ಲಕ್ಷದ ಚೆಕ್ಕನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಟಾಮ್‌ ಜೋಸ್‌ ಅವರಿಗೆ ಹಸ್ತಾಂತರಿಸಿದರು.

ಆರೋಗ್ಯ ಸಚಿವೆ. ಕೆ.ಕೆ.ಶೈಲಜಾ ಮತ್ತು ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಅವರು ಒಂದು ತಿಂಗಳ ವೇತನವನ್ನು ಇತ್ತೀಚೆಗಷ್ಟೇ ಪರಿಹಾರ ನಿಧಿಗೆ ನೀಡಿದ್ದರು.

ಮುಖ್ಯಮಂತ್ರಿ ಕಚೇರಿ ಮತ್ತು ಕನಿಷ್ಠ ನಾಲ್ಕು ಸಚಿವಾಲಯಗಳ ಸಿಬ್ಬಂದಿ ತಿಂಗಳ ವೇತನವನ್ನು ದೇಣಿಗೆ ನೀಡಲು ಮುಂದಾಗಿದ್ದಾರೆ. ರಾಜ್ಯ ಸಚಿವಾಲಯದ ಅಧಿಕಾರಿಗಳು, ಐ‍ಪಿಎಸ್‌ ಅಧಿಕಾರಿಗಳು ಸೇರಿದಂತೆ ಹಲವು ಉದ್ಯೋಗಿಗಳು ಸಹ ತಿಂಗಳ ವೇತನ ನೀಡಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ವಿಜಯನ್‌ ಅವರು ‘ತಿಂಗಳ ವೇತನ’ವನ್ನು ಕೇರಳ ಪುನಃ ಕಟ್ಟಲು ಕೊಡುಗೆ ನೀಡುವಂತೆ ಕರೆ ಕೊಟ್ಟ ನಂತರ, ದೇಣಿಗೆ ನೀಡಲು ರಾಜ್ಯದಲ್ಲಿ ಹಲವು ಮಂದಿ ಮುಂದೆ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT