ನವದೆಹಲಿ: ಪಂಜಾಬಿನ ಜಲಂಧರ್ ವಿಶೇಷ ನ್ಯಾಯಾಲಯವು ಹಣ ಅಕ್ರಮ ವರ್ಗಾವಣೆ ಹಾಗೂ ಮಾದಕ ವಸ್ತು ಕಳ್ಳ ಸಾಗಣೆ ಪ್ರಕರಣದ ಅಪರಾಧಿಗೆ 3.5 ವರ್ಷ ಕಠಿಣ ಜೈಲು ಶಿಕ್ಷೆ, 50 ಸಾವಿರ ದಂಡ ವಿಧಿಸಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣ ಕಾಯ್ದೆಯಡಿ (PMLA) ಶಿಕ್ಷೆ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನವದೀಪ್ ಸಿಂಗ್ ಎಂಬಾತನನ್ನು ಅಪರಾಧಿ ಎಂದು ಆಗಸ್ಟ್ 17ರಂದು ತೀರ್ಪು ನೀಡಿತ್ತು. ಒಂದು ವೇಳೆ ದಂಡ ಪಾವತಿಸದಿದ್ದರೆ, ಶಿಕ್ಷೆಯನ್ನು ಮೂರು ತಿಂಗಳು ವಿಸ್ತಾರಿಸಲಾಗುವುದು ಎಂದು ಎಚ್ಚರಿಸಿದೆ.
ಈ ಹಿಂದೆ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದ್ದ ₹9 ಲಕ್ಷ ನಗದು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಲಾಗಿದೆ.
ನವದೀಪ್ ಸಿಂಗ್ ಹಾಗೂ ಇತರರ ವಿರುದ್ಧ ಪಂಜಾಬ್ ಪೊಲೀಸರು 2017ರಲ್ಲಿ, ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸ್ ತನಿಖೆಯ ಪ್ರಕಾರ, ನವದೀಪ್ ಸಿಂಗ್ ಹಾಗೂ ಈಗಾಗಲೇ ಮೃತಪಟ್ಟಿರುವ ಸರಬ್ಜಿತ್ ಸಿಂಗ್ ಮತ್ತು ಪಾಲ್ ಸಿಂಗ್, ಕೆನಡಾದ ಪ್ರಜೆ ರೂಪಿಂದರ್ ಸಿಂಗ್ ಅಲಿಯಾಸ್ ರಾಬ್ ಸಿಧು ಜೊತೆಗೂಡಿ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.