ನವದೆಹಲಿ: ಜಾತಿ ಜನಗಣತಿ ನಿಲುವಿಗೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಜಿ.ನಿಶಿಕಾಂತ್ ದುಬೆ, ‘ಕಾಂಗ್ರೆಸ್ ಮೊದಲು ಕರ್ನಾಟಕದಲ್ಲಿಯೇ ಜಾತಿ ಜನಗಣತಿ ನಡೆಸಲಿ’ ಎಂದಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ದುಬೆ, ‘ಹಿಂದುಳಿದವರು, ಬಡವರಿಗೆ ನ್ಯಾಯ ಒದಗಿಸುವ ಸಾಮರ್ಥ್ಯ ನಿಮಗಿಲ್ಲ. ಅದೇ ಕಾರಣಕ್ಕೆ ಜಾತಿ ಜನಗಣತಿ ಕುರಿತು ಮಾತನಾಡುತ್ತಿದ್ದೀರಿ. ಧೈರ್ಯವಿದ್ದರೆ ಮೊದಲು ಕರ್ನಾಟಕದಲ್ಲೇ ಜಾತಿ ಜನಗಣತಿ ಮಾಡಿಸಿ’ ಎಂದು ಒತ್ತಾಯಿಸಿದರು.
‘ಕರ್ನಾಟಕದಲ್ಲಿ ಎರಡು ವರ್ಷದಿಂದ ನಿಮ್ಮ ಪಕ್ಷದ ಸರ್ಕಾರವೇ ಇದೆ. ಅಲ್ಲಿ ಏಕೆ ಸಾಮಾಜಿಕ –ಆರ್ಥಿಕ ಮೀಸಲಾತಿ ಇಲ್ಲ. ನೀವು ಏಕೆ ಜಾರಿಗೆ ತಂದಿಲ್ಲ ಎಂದರೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಜಾತಿ ಬಗ್ಗೆ ಮಾತನಾಡುವುದಿಲ್ಲ. ಹಿಂಬಾಗಿಲ ಮೂಲಕ ಕ್ರೈಸ್ತರಲ್ಲಿರುವ 86 ಜಾತಿಗಳು, ಮುಸ್ಲಿಮರಲ್ಲಿನ 56 ಜಾತಿಗಳವರಿಗೆ ಒಬಿಸಿ ಮೀಸಲಾತಿ ನೀಡಿದ್ದೀರಿ’ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಪಕ್ಷ ದಶಕಗಳಿಂದಲೂ ಒಬಿಸಿಗಳಿಗೆ ಮೀಸಲಾತಿ ವಿರೋಧಿಸುತ್ತಿದೆ. ಒಬಿಸಿಯವರನ್ನು ಎಂದಿಗೂ ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶದಲ್ಲಿ ಸಿ.ಎಂ ಆಗಿ ನೇಮಿಸಿಲ್ಲ ಎಂದು ಟೀಕಿಸಿದರು.
‘1952, 1957, 1962, 1969, 1971, 1980, 1984, 1989, ಮತ್ತು 1991ರಲ್ಲಿ ಪ್ರಕಟಿಸಿದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೂ ಒಬಿಸಿ ಮೀಸಲಾತಿಗೆ ವಿರೋಧ ಇರುವುದಾಗಿಯೇ ಉಲ್ಲೇಖಿಸಲಾಗಿದೆ. 1977ರಲ್ಲಿ ಚರಣಸಿಂಗ್ ಅವರು ಮೀಸಲಾತಿ ಕೊಡಲು ಬಯಸಿದ್ದರು. ಅವರ ಸರ್ಕಾರ ಪದಚ್ಯುತಗೊಳಿಸಿದ್ದೀರಿ. 1989ರಲ್ಲಿ ವಿ.ಪಿ.ಸಿಂಗ್ ಸರ್ಕಾರವನ್ನು ಪದಚ್ಯುತಿಗೊಳಿಸಿ, ಚಂದ್ರಶೇಖರ್ ನೇತೃತ್ವದ ಸರ್ಕಾರವನ್ನು ತರಲು ಒತ್ತು ನೀಡಿದಿರಿ’ ಎಂದು ಅವರು ಆರೋಪಿಸಿದರು.