ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಕಲಿ ಎನ್‌ಕೌಂಟರ್‌ ಕೇಸಲ್ಲಿ ಮೋದಿಯನ್ನು ಸಿಲುಕಿಸಲು ಸಿಬಿಐ ಒತ್ತಡ ಹಾಕಿತ್ತು: ಶಾ

Last Updated 30 ಮಾರ್ಚ್ 2023, 3:24 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಗುಜರಾತ್‌ನ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ನರೇಂದ್ರ ಮೋದಿ ಅವರನ್ನು ಸಿಲುಕಿಸಲು ತನಿಖಾ ಸಂಸ್ಥೆ ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

ನರೇಂದ್ರ ಮೋದಿ ಸರ್ಕಾರವು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದ ಕುರಿತ ಪ್ರಶ್ನೆಗೆ ‘ನ್ಯೂಸ್ 18 ರೈಸಿಂಗ್ ಇಂಡಿಯಾ' ಕಾರ್ಯಕ್ರಮದಲ್ಲಿ ಶಾ ಉತ್ತರಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಮೋದಿ ಜಿ ಅವರ ಮೇಲೆ ಆರೋಪ ಹೊರಿಸಲು ಸಿಬಿಐ ತನಿಖೆ ವೇಳೆ ನನ್ನ ಮೇಲೆ ಒತ್ತಡ ಹೇರಿತ್ತು, ಆದರೂ ಬಿಜೆಪಿ ಯಾವತ್ತೂ ಗದ್ದಲ ಎಬ್ಬಿಸಲಿಲ್ಲ ಎಂದು ಅವರು ಹೇಳಿದ್ದಾರೆ.

ಸೂರತ್‌ನ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರಿಗೆ ಶಿಕ್ಷೆ ವಿಧಿಸಿರುವ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ರಾಹುಲ್ ಗಾಂಧಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ ಶಾಸಕಾಂಗದ ಸದಸ್ಯತ್ವವನ್ನು ಕಳೆದುಕೊಂಡ ಏಕೈಕ ರಾಜಕಾರಣಿ ಏನಲ್ಲ ಎಂದಿದ್ದಾರೆ.

ಉನ್ನತ ನ್ಯಾಯಾಲಯದ ಮೊರೆ ಹೋಗುವ ಬದಲು ರಾಹುಲ್ ಅಲವತ್ತುಕೊಳ್ಳುತ್ತಿದ್ಸಾರೆ. ಅವರ ದುರ್ದೆಸಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸುತ್ತಿದ್ದಾರೆ ಎಂದು ಶಾ ಹೇಳಿದರು.

ಕಾಂಗ್ರೆಸ್ ತಪ್ಪು ಮಾಹಿತಿಯನ್ನು ಹರಡುತ್ತಿದೆ. ನ್ಯಾಯಾಲಯ ದೋಷಿ ಎಂದು ನೀಡಿದ ತೀರ್ಪಿಗೆ ತಡೆ ನೀಡಲು ಬರುವುದಿಲ್ಲ, ಶಿಕ್ಷೆಗೆ ತಡೆ ನೀಡಬಹುದು ಎಂದು ಅವರು ಹೇಳಿದ್ದಾರೆ.

‘ತಮ್ಮ ಶಿಕ್ಷೆಗೆ ತಡೆ ನೀಡುವಂತೆ ರಾಹುಲ್ ನ್ಯಾಯಾಲಯಕ್ಕೆ ಮನವಿ ಮಾಡಿಲ್ಲ. ಇದು ಯಾವ ರೀತಿಯ ದುರಹಂಕಾರ? ನಿಮಗೆ ಅನುಕೂಲ ಬೇಕು. ನೀವು ಸಂಸದರಾಗಿ ಮುಂದುವರಿಯಲು ಬಯಸುತ್ತೀರಿ ಮತ್ತು ನ್ಯಾಯಾಲಯದ ಮುಂದೆ ಹೋಗುವುದಿಲ್ಲ’ಎಂದು ಶಾ ಹೇಳಿದರು.

2013ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಲಾಲು ಪ್ರಸಾದ್, ಜೆ ಜಯಲಲಿತಾ ಮತ್ತು ರಶೀದ್ ಅಲ್ವಿ ಸೇರಿದಂತೆ 17 ಮಂದಿ ಪ್ರಮುಖ ನಾಯಕರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದರು ಎಂದು ಶಾ ಹೇಳಿದರು.

ಚುನಾಯಿತ ಪ್ರತಿನಿಧಿಯು ಶಿಕ್ಷೆಯಾದ ತಕ್ಷಣ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾನೆ. ಆದರೆ, ಆಗ ಯಾರೂ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿಲ್ಲ, ಏಕೆಂದರೆ, ಇದು ದೇಶದ ಕಾನೂನು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT