ನವದೆಹಲಿ: ಮಹಿಳಾ ವೈದ್ಯರಿಗೆ ರಾತ್ರಿ ಪಾಳಿ ಕರ್ತವ್ಯ ರದ್ದು ಮಾಡುವ ಮತ್ತು ಅವರ ಕೆಲಸದ ಅವಧಿ ದಿನಕ್ಕೆ 12 ತಾಸು ಮೀರುವಂತಿಲ್ಲ ಎಂಬ ನಿಯಮಗಳನ್ನು ರೂಪಿಸಿರುವ ಪಶ್ಚಿಮ ಬಂಗಾಳ ಸರ್ಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ವೇಳೆ ಈ ವಿಚಾರ ಪ್ರಸ್ತಾಪಗೊಂಡಿತು. ಆಗ, ಈ ಕುರಿತ ಅಧಿಸೂಚನೆಯನ್ನು ಸರಿಪಡಿಸಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿತು.
‘ಮಹಿಳಾ ವೈದ್ಯರು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವಂತಿಲ್ಲ ಎಂದು ನೀವು ಹೇಳುವಂತಿಲ್ಲ. ಅವರಿಗೆ ಭದ್ರತೆ ಒದಗಿಸುವುದು ನಿಮ್ಮ ಕರ್ತವ್ಯ. ಪೈಲಟ್‌ಗಳು, ಸೇನೆ ಸಿಬ್ಬಂದಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಕೆಲಸದ ಅವಧಿ ಎಲ್ಲ ವೈದ್ಯರಿಗೂ ನ್ಯಾಯಯುತವಾಗಿರಬೇಕು’ ಎಂದೂ ನ್ಯಾಯಪೀಠ ಹೇಳಿತು.
ನ್ಯಾಯಪೀಠದ ಸೂಚನೆಯ ನಂತರ, ಮಹಿಳಾ ವೈದ್ಯರಿಗೆ ಸಂಬಂಧಿಸಿದ ಈ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯುವುದಾಗಿ ಪಶ್ಚಿಮ ಬಂಗಾಳ ಸರ್ಕಾರವು ಪೀಠಕ್ಕೆ ತಿಳಿಸಿತು.
ವೈದ್ಯರು ಸೇರಿದಂತೆ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಭದ್ರತೆಗಾಗಿ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನೂ ಪೀಠ ಪ್ರಶ್ನಿಸಿತು.
‘ವೈದ್ಯರಿಗೆ ಸೂಕ್ತ ಭದ್ರತೆ ಇಲ್ಲದಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರಾಜ್ಯ ಸರ್ಕಾರ ಕನಿಷ್ಠ ಪಕ್ಷ ಪೊಲೀಸರನ್ನಾದರೂ ನಿಯೋಜಿಸಬೇಕಿತ್ತು. ಇದು, ಕೆಲಸಕ್ಕಾಗಿ ಕೋಲ್ಕತ್ತಕ್ಕೆ ಬರುವ ವೈದ್ಯ ವಿದ್ಯಾರ್ಥಿಗಳ ಸುರಕ್ಷತೆಯ ಪ್ರಶ್ನೆ’ ಎಂದೂ ಪೀಠ ಹೇಳಿತು.
‘ಕ್ರಮ ಇಲ್ಲ’: ಪ್ರತಿಭಟನೆ ನಡೆಸುತ್ತಿರುವ ವೈದ್ಯರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ, ನ್ಯಾಯಪೀಠಕ್ಕೆ ತಿಳಿಸಿತು.
ಈ ಕುರಿತು ಕಿರಿಯ ವೈದ್ಯರ ಪರ ಹಾಜರಿದ್ದ ಹಿರಿಯ ವಕೀಲ ಇಂದಿರಾ ಜೈಸಿಂಗ್ ಪ್ರಸ್ತಾಪಿಸಿದ್ದರು.