ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಸೇವನೆಯಿಂದ ಐಶ್ವರ್ಯರಂತೆ ಹೊಳಪಿನ ಕಣ್ಣು; ಗವಿತ್ ಸಲಹೆಗೆ ನೆಟ್ಟಿಗರು ಕಿಡಿ

Published 21 ಆಗಸ್ಟ್ 2023, 11:23 IST
Last Updated 21 ಆಗಸ್ಟ್ 2023, 11:23 IST
ಅಕ್ಷರ ಗಾತ್ರ

ಮುಂಬೈ: ಪ್ರತಿದಿನ ಮೀನು ಸೇವೆನೆ ಮಾಡುವುದರಿಂದ ಬಾಲಿವುಡ್‌ ನಟಿ ಐಶ್ವರ್ಯ ರೈನಂತೆ ಹೊಳಪಿನ ಕಣ್ಣುಗಳನ್ನು ಹೊಂದಬಹುದು ಎಂದು ಮಹಾರಾಷ್ಟ್ರದ ರಾಜ್ಯ ಬುಡಕಟ್ಟು ಸಚಿವ ವಿಜಯಕುಮಾರ್ ಗವಿತ್ ಹೇಳಿದ್ದಾರೆ.

ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ದಿನನಿತ್ಯ ಮೀನು ಸೇವಿಸುವವರ ತ್ವಚೆ ಮೃದುವಾಗಿರುತ್ತದೆ ಮತ್ತು ಅವರ ಕಣ್ಣುಗಳು ಹೊಳಪಿನಿಂದ ಕೂಡಿರುತ್ತವೆ. ಹೊಳೆಯುವ ಕಣ್ಣುಗಳತ್ತ ಜನರು ಹೆಚ್ಚು ಆಕರ್ಷಿತರಾಗುತ್ತಾರೆ’ ಎಂದರು.

‘ನಾನು ನಿಮಗೆ ಐಶ್ವರ್ಯ ರೈ ಅವರ ಬಗ್ಗೆ ಹೇಳಲಾ? ನೀವು ಎಂದಾದರೂ ಆಕೆಯ ಕಣ್ಣುಗಳನ್ನು ನೋಡಿದ್ದೀರಾ? ಅವರು ಮಂಗಳೂರಿನ ಕಡಲ ತೀರದಲ್ಲಿ ವಾಸವಿದ್ದು, ಪ್ರತಿದಿನ ಮೀನು ಸೇವಿಸುತ್ತಿದ್ದರು. ದಿನಾ ಮೀನು ಸೇವಿಸಿದರೆ ನೀವು ಅವರಂತೆ ಕಣ್ಣುಗಳನ್ನು ಹೊಂದಬಹುದು. ಮೀನಿನಲ್ಲಿ ವಿಶೇಷವಾದ ಎಣ್ಣೆಯಂಶವಿದ್ದು, ಅದು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ’ ಎಂದು ತಿಳಿಸಿದ್ದಾರೆ.

ಗವಿತ್ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಐಶ್ವರ್ಯ ರೈ ಕಣ್ಣುಗಳನ್ನು ಬಿಟ್ಟು ರಾಜ್ಯದ ಜಲ್ವಂತ ಸಮಸ್ಯೆ ಕಡೆ ಗಮನ ಹರಿಸುವಂತೆ ನೆಟ್ಟಿಗರು ಕುಟುಕಿದ್ದಾರೆ.

ಗವಿತ್‌ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎನ್‌ಸಿಪಿ ಶಾಸಕ ಅಮೋಲ್ ಮಿಟ್ಕರಿ, ‘ಸಚಿವರು ಇಂತಹ ಕ್ಷುಲ್ಲಕ ಹೇಳಿಕೆ ನೀಡುವ ಬದಲು ಬುಡಕಟ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ’ ಎಂದರು.

‘ನಾನು ಪ್ರತಿದಿನ ಮೀನು ತಿನ್ನುತ್ತೇನೆ. ನನ್ನ ಕಣ್ಣುಗಳು ಐಶ್ವರ್ಯಾ ರೈ ಅವರಂತೆ ಆಗಬೇಕಿತ್ತು. ಇದರ ಬಗ್ಗೆ ಏನಾದರೂ ಸಂಶೋಧನೆ ನಡೆದಿದೆಯೇ ಎಂದು ಗವಿತ್ ಅವರಲ್ಲಿ ಕೇಳುತ್ತೇನೆ’ ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ಸಚಿವರ ಕಾಲೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT