ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆ ಹಂತದಲ್ಲಿ ಬಂಧನ ಸಲ್ಲ: ಸುಪ್ರೀಂ ಕೋರ್ಟ್‌ ಸ್ಪಷ್ಟನೆ

ಹಣ ಅಕ್ರಮ ವರ್ಗಾವಣೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ 19ರ ಅಡಿಯ ಕ್ರಮದ ಕುರಿತು ‘ಸುಪ್ರೀಂ’ ಸ್ಪಷ್ಟನೆ
Published 16 ಮೇ 2024, 15:52 IST
Last Updated 16 ಮೇ 2024, 15:52 IST
ಅಕ್ಷರ ಗಾತ್ರ

ನವದೆಹಲಿ: ವಿಶೇಷ ನ್ಯಾಯಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ಬಳಿಕ, ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ 19ರಡಿ ಆರೋಪಿಯನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಆರೋಪಿಯು ಸಮನ್ಸ್‌ ಅನ್ವಯ ನ್ಯಾಯಾಲಯಕ್ಕೆ ಹಾಜರಾದಾಗ, ಅವರನ್ನು ಕಸ್ಟಡಿಗೆ ಪಡೆಯಲು ಸಂಸ್ಥೆಯು ಸಂಬಂಧಿಸಿದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಭಯ್‌ ಎಸ್‌. ಓಕಾ ಮತ್ತು ಉಜ್ಜಲ್‌ ಭುಯಿಯಾಂ ಅವರ ಪೀಠ ತಿಳಿಸಿದೆ.

ಆರೋಪಿಯನ್ನು ಕಸ್ಟಡಿಗೆ ಪಡೆಯಬೇಕು ಎಂದು ಇ.ಡಿ ಬಯಸಿದರೆ, ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ವಿಶೇಷ ನ್ಯಾಯಾಲಯವು ಅರ್ಜಿಯನ್ನು ಪರಿಶೀಲಿಸಿ, ಕಸ್ಟಡಿಯ ಕಾರಣಗಳನ್ನು ದಾಖಲಿಸಿಕೊಂಡು ಕಸ್ಟಡಿ ಆದೇಶ ಹೊರಡಿಸುತ್ತದೆ. 

ಈ ಹಂತದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುವ ಅವಶ್ಯಕತೆ ಇದೆ ಎಂಬುದು ನ್ಯಾಯಾಲಯಕ್ಕೆ ಮನವರಿಕೆ ಆದರೆ ಮಾತ್ರ ಕಸ್ಟಡಿಗೆ ನೀಡುವ ಆದೇಶ ಹೊರಡಿಸಬಹುದು. ಪ್ರಕರಣದಲ್ಲಿ ಆರೋಪಿಯನ್ನು ಒಮ್ಮೆಯೂ ಬಂಧಿಸದಿದ್ದರೂ ಇದು ಅನ್ವಯ ಆಗುತ್ತದೆ. 

ಪೀಠ ಹೇಳಿದ ಪ್ರಮುಖಾಂಶಗಳು:

* ಆರೋಪಿಯು ವಿಶೇಷ ನ್ಯಾಯಾಲಯಕ್ಕೆ ಸಮನ್ಸ್‌ ಮೂಲಕ ಹಾಜರಾಗಿದ್ದರೆ, ಆವರನ್ನು ಕಸ್ಟಡಿಯಲ್ಲಿದ್ದಾರೆ ಎಂದು ಪರಿಗಣಿಸಲು ಆಗುವುದಿಲ್ಲ

* ಆರೋಪಿಯು ಸಮನ್ಸ್‌ಗೆ ಅನುಗುಣವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರೆ, ಅವರು ಜಾಮೀನಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅವರಿಗೆ ಪಿಎಂಎಲ್‌ಎ ಸೆಕ್ಷನ್‌ 45ರಲ್ಲಿ ಇರುವ ಅವಳಿ ಷರತ್ತುಗಳು ಅನ್ವಯಿಸುವುದಿಲ್ಲ

* ಈ ಅವಳಿ ಷರತ್ತುಗಳೆಂದರೆ, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯು ಜಾಮೀನಿಗೆ ಅರ್ಜಿ ಸಲ್ಲಿಸಿದಾಗ, ನ್ಯಾಯಾಲಯವು ಮೊದಲು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರ ವಾದವನ್ನು ಆಲಿಸಬೇಕು; ವಿಚಾರಣೆ ವೇಳೆ ಆರೋಪಿ ತಪ್ಪಿತಸ್ಥನಲ್ಲ ಎಂದು ಕಂಡುಬಂದರೆ ಹಾಗೂ ಆರೋಪಿಯನ್ನು ಬಿಡುಗಡೆ ಮಾಡಿದರೆ ತಪ್ಪು ಪುನರಾವರ್ತನೆ ಆಗುವ ಸಾಧ್ಯತೆ ಇಲ್ಲ ಎಂಬುದು ಮನದಟ್ಟಾದರೆ ಮಾತ್ರ ಅವರಿಗೆ ಜಾಮೀನು ನೀಡಬಹುದು

* ವಿಶೇಷ ನ್ಯಾಯಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ಬಳಿಕ, ಆರೋಪಿಯು ಜಾಮೀನಿಗಾಗಿ ಎರಡು ಅವಳಿ ಷರತ್ತುಗಳನ್ನು ಪೂರೈಸಬೇಕೇ ಎಂಬುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. 

‘ಕೇಜ್ರಿವಾಲ್‌ಗೆ ಯಾವ ವಿನಾಯಿತಿಯನ್ನೂ ತೋರಿಲ್ಲ’

ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ನೀಡಿರುವ ಮಧ್ಯಂತರ ಜಾಮೀನು ವಿಚಾರದಲ್ಲಿ ಯಾವುದೇ ವಿನಾಯಿತಿಯನ್ನು ಕೊಟ್ಟಿಲ್ಲ ಎಂದು ಗುರುವಾರ ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನ ಕುರಿತ ವಿಮರ್ಶೆಗಳನ್ನು ಸ್ವಾಗತಿಸುವುದಾಗಿ ಹೇಳಿದೆ. ಎಎಪಿ ರಾಷ್ಟ್ರೀಯ ಸಂಚಾಲಕರಿಗೆ ನೀಡಿರುವ ಮಧ್ಯಂತರ ಜಾಮೀನಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಜ್ರಿವಾಲ್‌ ಪರ ವಕೀಲರು ಮಾಡಿದ ವಾದ ಪ್ರತಿವಾದಗಳನ್ನು ಪರಿಗಣಿಸಲು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತಾ ಅವರ ಪೀಠ ನಿರಾಕರಿಸಿತು. ‘ನಾವು ಯಾರಿಗೂ ವಿನಾಯಿತಿ ನೀಡಿಲ್ಲ. ಸಮರ್ಥನೆಗೆ ಬೇಕಾದ ಅಂಶಗಳನ್ನು ಆದೇಶದಲ್ಲಿ ಹೇಳಿದ್ದೇವೆ’ ಎಂದು ಪೀಠ ಹೇಳಿತು.

ಇ.ಡಿ ಪರ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರು ‘ಚುನಾವಣಾ ರ್‍ಯಾಲಿಗಳಲ್ಲಿ ಕೇಜ್ರಿವಾಲ್‌ ಅವರು ಜನರು ಎಎಪಿಗೆ ಮತ ನೀಡಿದರೆ ತಾನು ಜೂನ್‌ 2ರಂದು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ ಎಂದು ಭಾಷಣ ಮಾಡಿದ್ದಾರೆ’ ಎಂದು ಆಕ್ಷೇಪಿಸಿದರು. ‘ಇದು ಅವರ ಊಹೆ. ನಾವು ಇದಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದ ಪೀಠ ‘ಅವರು ಯಾವಾಗ ಶರಣಾಗಬೇಕು ಎಂಬುದರ ಕುರಿತು ನಮ್ಮ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ಅದು ಸುಪ್ರೀಂ ಕೋರ್ಟ್‌ನ ಆದೇಶವಾಗಿದೆ’ ಎಂದು ಹೇಳಿತು. ಷರತ್ತು ಉಲ್ಲಂಘನೆ– ಆರೋಪ: ಕೇಜ್ರಿವಾಲ್‌ ಅವರು ಜಾಮೀನಿನ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ ಮೆಹ್ತಾ ‘ಅವರು ಏನನ್ನು ಸೂಚಿಸುತ್ತಿದ್ದಾರೆ? ಇದು ನ್ಯಾಯಿಕ ಸಂಸ್ಥೆಗೇ ಪೆಟ್ಟು ನೀಡಿದಂತೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಖನ್ನಾ ಅವರು ಜೂನ್‌ 2ರಂದು ಅವರು ಶರಣಾಗಬೇಕು ಎಂಬ ನ್ಯಾಯಾಲಯದ ಆದೇಶ ಸ್ಪಷ್ಟವಾಗಿದೆ ಎಂದರು. ‘ಅದಾಗ್ಯೂ ಕೇಜ್ರಿವಾಲ್‌ ಅವರಿಗೆ ಪ್ರಕರಣದ ಕುರಿತು ಮಾತನಾಡುವಂತಿಲ್ಲ ಎಂದು ನಾವು ಆದೇಶದಲ್ಲಿ ಹೇಳಿಲ್ಲ’ ಎಂದೂ ಪೀಠ ಹೇಳಿತು. ಅಮಿತ್‌ ಶಾ ಹೇಳಿಕೆ ಉಲ್ಲೇಖ: ಕೇಜ್ರಿವಾಲ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರು ‘ಹಿರಿಯ ಸಚಿವರೊಬ್ಬರು ಎಎಪಿ ನಾಯಕನಿಗೆ ನ್ಯಾಯಾಲಯವು ‘ವಿಶೇಷ ಗೌರವ’ ನೀಡಿದೆ ಎಂದೇ ಹಲವರು ನಂಬಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ’ ಎಂದು ಗೃಹ ಸಚಿವ ಅಮಿತ್‌ ಶಾ ಅವರ ಹೆಸರನ್ನು ಉಲ್ಲೇಖಿಸಿದೆ ತಿಳಿಸಿದರು. ‘ಆ ವಿಷಯಕ್ಕೆ ನಾವು ಹೋಗುವುದಿಲ್ಲ’ ಎಂದು ಪೀಠ ಸಿಂಘ್ವಿ ಅವರಿಗೆ ತಿಳಿಸಿತು. ಜನರು ಎಎಪಿಗೆ ಮತ ನೀಡದಿದ್ದರೆ ಮತ್ತೆ ತಾನು ಜೈಲಿಗೆ ಹೋಗಬೇಕಾಗುತ್ತದೆ ಎಂದು ಕೇಜ್ರಿವಾಲ್‌ ಅವರು ಹೇಳಿಕೆ ನೀಡಿಲ್ಲ ಎಂದು ಸಿಂಘ್ವಿ ಅವರು ಪೀಠಕ್ಕೆ ತಿಳಿಸಿದರು. ‘ಅಗತ್ಯವಿದ್ದರೆ ಈ ಕುರಿತು ಪ್ರಮಾಣಪತ್ರ ಸಲ್ಲಿಸುತ್ತೇವೆ’ ಎಂದರು. ಬಂಧನವನ್ನು ಪ್ರಶ್ನಿಸಿರುವ ಕೇಜ್ರಿವಾಲ್‌ ಅವರ ಅರ್ಜಿ ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT