ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠರ ಬೇಡಿಕೆ, ಮೀಸಲಾತಿ ಈಡೇರಿಕೆಗೆ ಸರ್ಕಾರ ಬದ್ಧ: ದೇವೇಂದ್ರ ಫಡಣವೀಸ್‌

Published 23 ನವೆಂಬರ್ 2023, 8:23 IST
Last Updated 23 ನವೆಂಬರ್ 2023, 8:23 IST
ಅಕ್ಷರ ಗಾತ್ರ

ಮುಂಬೈ: ಮರಾಠರು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವು ಬದ್ಧವಾಗಿದೆ ಮತ್ತು ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಗುರುವಾರ ಹೇಳಿದ್ದಾರೆ.

ಸೊಲ್ಲಾಪುರ ಜಿಲ್ಲೆಯ ಪಂಢರಪುರ ಪಟ್ಟಣದ ವಿಠ್ಠಲ ಮತ್ತು ರುಕ್ಮಿಣಿ ದೇವಿಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಪತ್ನಿ ಜೊತೆ ತೆರಳಿದ್ದ ವೇಳೆ ಫಡಣವೀಸ್‌ ಅವರನ್ನು ಮರಾಠ ಸಮುದಾಯದ ನಿಯೋಗ ಭೇಟಿ ಮಾಡಿದೆ. ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ಸಮುದಾಯದವರು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಫಡಣವೀಸ್‌, ‘ಮರಾಠ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವು ಬದ್ಧವಾಗಿದೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಸಮಸ್ಯೆಯನ್ನು ಖಂಡಿತವಾಗಿ ಪರಿಹರಿಸಲಾಗುವುದು. ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ’ ಎಂದು ಅವರು ಹೇಳಿದ್ದಾರೆ.

ಪಂಢರಪುರದಲ್ಲಿ ಮರಾಠ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿವೇಶನ ನೀಡಬೇಕು, ಅಣ್ಣಾಸಾಹೇಬ ಪಾಟೀಲ ಆರ್ಥಿಕ ವಿಕಾಸ ಮಹಾಮಂಡಳ ಹಾಗೂ ಸಾರಥಿ ಉಪಕೇಂದ್ರಗಳ ಆರಂಭ, ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ ನಿರ್ಮಾಣ ಮಾಡಬೇಕೆಂದು ನಿಯೋಗವು ಒತ್ತಾಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT