ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ ನಿನೊ ದುರ್ಬಲ: ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ- ಹವಾಮಾನ ತಜ್ಞರು

Published 11 ಫೆಬ್ರುವರಿ 2024, 15:47 IST
Last Updated 11 ಫೆಬ್ರುವರಿ 2024, 15:47 IST
ಅಕ್ಷರ ಗಾತ್ರ

ನವದೆಹಲಿ : ಎಲ್ ನಿನೊ ಪರಿಣಾಮವು ಜೂನ್‌ ತಿಂಗಳಿಗೂ ಮೊದಲು ದುರ್ಬಲಗೊಳ್ಳಲಿದೆ, ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಸುರಿಯಲಿದೆ ಎಂಬ ಆಶಾಭಾವನೆಯನ್ನು ಹವಾಮಾನ ತಜ್ಞರು ವ್ಯಕ್ತಪಡಿಸಿದ್ದಾರೆ.

ಜಗತ್ತಿನಾದ್ಯಂತ ಹವಾಮಾನದ ಮೇಲೆ ಪರಿಣಾಮ ಉಂಟುಮಾಡುವ ಎಲ್‌ ನಿನೊ ದುರ್ಬಲಗೊಳ್ಳುವುದು ಶುರುವಾಗಿದೆ ಎಂಬುದನ್ನು ಎರಡು ಜಾಗತಿಕ ಹವಾಮಾನ ಸಂಸ್ಥೆಗಳು ಕಳೆದ ವಾರ ಹೇಳಿವೆ. ಆಗಸ್ಟ್‌ಗೂ ಮೊದಲು ಲಾ ನಿನಾ ಪರಿಣಾಮ ಶುರುವಾಗಬಹುದು ಎಂದು ಅವು ಹೇಳಿವೆ.

ಈ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿರುವ ಭಾರತದ ಹವಾಮಾನ ತಜ್ಞರು, ಜೂನ್‌–ಆಗಸ್ಟ್‌ಗೆ ಮೊದಲು ಲಾ ನಿನಾ ಪರಿಣಾಮ ಶುರುವಾದರೆ ಮುಂಗಾರು ಮಳೆಯು ಹಿಂದಿನ ವರ್ಷಕ್ಕಿಂತ ಚೆನ್ನಾಗಿ ಆಗಲಿದೆ ಎಂದು ಹೇಳಿದ್ದಾರೆ.

ಜೂನ್‌–ಜುಲೈಗೆ ಮೊದಲು ಲಾ ನಿನಾ ಪರಿಸ್ಥಿತಿ ನಿರ್ಮಾಣ ಆಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಭೂವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಮಾಧವನ್ ರಾಜೀವನ್ ಹೇಳಿದ್ದಾರೆ. ‘ಎಲ್‌ ನಿನೊ ಪರಿಸ್ಥಿತಿಯು ಬದಲಾಗಿ, ಎಲ್‌ ನಿನೊ ಹಾಗೂ ಲಾ ನಿನಾ ಎರಡೂ ಇಲ್ಲದ ಸ್ಥಿತಿ (ಎನ್ಸೊ–‌ತಟಸ್ಥ ಸ್ಥಿತಿ) ಎದುರಾದರೂ ಮುಂಗಾರು ಮಳೆಯು ಈ ವರ್ಷದಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಸುರಿಯುವ ಒಟ್ಟು ಮಳೆಯಲ್ಲಿ ಶೇಕಡ 70ರಷ್ಟು ಮಳೆ ನೈಋತ್ಯ ಮಾರುತಗಳಿಂದಾಗಿ ಆಗುತ್ತದೆ. ದೇಶದ ಜಿಡಿಪಿಗೆ ಶೇಕಡ 14ರಷ್ಟು ಕೊಡುಗೆ ನೀಡುವ ಕೃಷಿ ಕ್ಷೇತ್ರಕ್ಕೆ ಈ ಮಳೆಯು ಬಹಳ ಮಹತ್ವದ್ದು.

ಎಲ್‌ ನಿನೊ ಪರಿಣಾಮವು ಎನ್ಸೊ–‌ತಟಸ್ಥ ಸ್ಥಿತಿಯಾಗಿ ಪರಿವರ್ತನೆ ಕಾಣುವ ಸಾಧ್ಯತೆಯು ಶೇಕಡ 79ರಷ್ಟು ಇದೆ ಎಂದು ಅಮೆರಿಕದ ಎನ್‌ಒಎಎ ಸಂಸ್ಥೆ ಅಂದಾಜು ಮಾಡಿದೆ. ಹಾಗೆಯೇ, ಜೂನ್‌–ಆಗಸ್ಟ್‌ ವೇಳೆಗೆ ಲಾ ನಿನಾ ಪರಿಸ್ಥಿತಿ ನಿರ್ಮಾಣ ಆಗುವ ಸಾಧ್ಯತೆಯು ಶೇ 55ರಷ್ಟು ಇದೆ ಎಂದು ಕೂಡ ಅದು ಹೇಳಿದೆ.

ಎಲ್‌ ನಿನೊ ಪರಿಸ್ಥಿತಿ ದುರ್ಬಲಗೊಳ್ಳುವುದು ಶುರುವಾಗಿದೆ ಎಂದು ಐರೋಪ್ಯ ಒಕ್ಕೂಟದ ಕೋಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವಿಸ್ (ಸಿ3ಎಸ್) ಸಂಸ್ಥೆ ಖಚಿತಪಡಿಸಿದೆ. ‘ಈ ಸಂದರ್ಭದಲ್ಲಿ ನಾವು ಯಾವುದನ್ನೂ ಖಚಿತವಾಗಿ ಹೇಳುವ ಸ್ಥಿತಿಯಲ್ಲಿಲ್ಲ. ಕೆಲವು ಅಧ್ಯಯನಗಳು ಲಾ ನಿನಾ ಪರಿಸ್ಥಿತಿ ನಿರ್ಮಾಣ ಆಗಬಹುದು ಎನ್ನುತ್ತವೆ. ಇನ್ನು ಕೆಲವು ಅಧ್ಯಯನಗಳು ಎನ್ಸೊ–ತಟಸ್ಥ ಸ್ಥಿತಿ ನಿರ್ಮಾಣವಾಗಬಹುದು ಎನ್ನುತ್ತಿವೆ. ಆದರೆ ಎಲ್ಲ ಅಧ್ಯಯನಗಳೂ ಎಲ್‌ ನಿನೊ ಕೊನೆಗೊಳ್ಳುತ್ತಿರುವುದನ್ನು ಸೂಚಿಸುತ್ತಿವೆ’ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಡಿ. ಶಿವಾನಂದ ಪೈ ತಿಳಿಸಿದರು.

‘ಎಲ್‌ ನಿನೊ ಪರಿಸ್ಥಿತಿಯು ಎನ್ಸೊ–ತಟಸ್ಥ ಸ್ಥಿತಿಯಾಗಿ ಪರಿವರ್ತನೆ ಕಂಡರೂ ಮುಂಗಾರು ಮಳೆಯು ಈ ವರ್ಷ ಹಿಂದಿನ ವರ್ಷಕ್ಕಿಂತ ಚೆನ್ನಾಗಿ ಆಗಲಿದೆ’ ಎಂದು ಪೈ ತಿಳಿಸಿದರು. 2023ರ ಮುಂಗಾರು ಅವಧಿಯಲ್ಲಿ ಭಾರತವು ಸರಾಸರಿ ವಾಡಿಕೆಗಿಂತ ಕಡಿಮೆ ಮಳೆಯನ್ನು ಕಂಡಿತ್ತು. ಎಲ್‌ ನಿನೊ ಪರಿಣಾಮದಿಂದಾಗಿ ಹೀಗಾಗಿದೆ ಎಂದು ತಜ್ಞರು ಹೇಳಿದ್ದರು.

ಜೂನ್‌ ತಿಂಗಳಿಗೂ ಮೊದಲು ನಾ ನಿನಾ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತಿವೆ. ಹೀಗಾದರೆ ಮುಂಗಾರು ಮಳೆಯು ಸಕಾಲದಲ್ಲಿ, ಚೆನ್ನಾಗಿ ಸುರಿಯುತ್ತದೆ ಎಂದು ಹವಾಮಾನ ತಜ್ಞ ರೊಕ್ಸಿ ಮ್ಯಾಥ್ಯೂ ಕೆ. ಹೇಳಿದರು. ತಾಪಮಾನ ಕಡಿಮೆ ಆಗದೆ ಇದ್ದರೆ, ಮಾರುತಗಳ ಪ್ರಭಾವ ಹೆಚ್ಚಿರುತ್ತದೆ, ಅತಿವೃಷ್ಟಿಯೂ ಆಗಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT