ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Electoral Bonds: ಸುಪ್ರೀಂ ಕೋರ್ಟ್ ತರಾಟೆ ಬಳಿಕ ಎಲ್ಲ ದಾಖಲೆ ಸಲ್ಲಿಸಿದ ಎಸ್‌ಬಿಐ

Published 21 ಮಾರ್ಚ್ 2024, 12:54 IST
Last Updated 21 ಮಾರ್ಚ್ 2024, 12:54 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಅಲ್ಫಾನ್ಯೂಮರಿಕ್‌ ಸಂಖ್ಯೆಗಳೂ ಸೇರಿದಂತೆ ಎಲ್ಲ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

ಈ ಸಂಬಂಧ ಎಸ್‌ಬಿಐ ಪ್ರಮಾಣಪತ್ರ ಸಲ್ಲಿಸಿದೆ. ಎಸ್‌ಬಿಐ ಮುಖ್ಯಸ್ಥ ದಿನೇಶ್‌ ಕುಮಾರ್‌ ಖರಾ ಅವರು, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ತನ್ನ ಬಳಿ ಇರುವ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಿರುವ ಬ್ಯಾಂಕ್‌, ಎಲ್ಲ ದಾಖಲೆಗಳನ್ನು ಚುನಾವಣಾ ಆಯೋಗದ ವಶಕ್ಕೆ ನೀಡಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಆದಾಗ್ಯೂ ಅವರು, 'ಸಂಪೂರ್ಣ ಬ್ಯಾಂಕ್‌ ಖಾತೆ ಸಂಖ್ಯೆಗಳು ಮತ್ತು ರಾಜಕೀಯ ಪಕ್ಷಗಳ ಕೆವೈಸಿ ವಿವರಗಳನ್ನು ಸೈಬರ್‌ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕಗೊಳಿಸಿಲ್ಲ. ಅದೇರೀತಿ, ಬಾಂಡ್‌ ಖರೀದಿಸುವವರ ವೈಯಕ್ತಿಕ ವಿವರಗಳನ್ನೂ ಭದ್ರತೆಯ ಕಾರಣದಿಂದ ಬಹಿರಂಗಗೊಳಿಸಿಲ್ಲ. ಅಂಥ ಮಾಹಿತಿ ಸಿಸ್ಟಂನಲ್ಲಿ ಲಭ್ಯವಿಲ್ಲ ಎಂಬುದು ಸತ್ಯ. ಆದಾಗ್ಯೂ, ರಾಜಕೀಯ ಪಕ್ಷಗಳನ್ನು ಗುರುತಿಸಲು ವೈಯಕ್ತಿಕ ವಿವರದ ಮಾಹಿತಿ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.

2018ರಲ್ಲಿ ಯೋಜನೆ ಆರಂಭವಾದ ಬಳಿಕ ಚುನಾವಣಾ ಬಾಂಡ್‌ಗಳ ವಿತರಣೆ ಮಾಡುತ್ತಿದ್ದ ಬ್ಯಾಂಕ್‌, 'ಬಾಂಡ್‌ ಖರೀದಿಸಿದವರ ಹೆಸರು, ವಿವಿಧ ಬಗೆಯ ಬಾಂಡ್‌ಗಳ ನಿರ್ದಿಷ್ಟ ಸಂಖ್ಯೆ, ಬಾಂಡ್‌ ನಗದೀಕರಿಸಿಕೊಂಡ ಪಕ್ಷ, ರಾಜಕೀಯ ಪಕ್ಷಗಳ ಬ್ಯಾಂಕ್‌ ಖಾತೆಗಳ ಕೊನೆಯ ನಾಲ್ಕು ಸಂಖ್ಯೆಯನ್ನು ತೋರಿಸುವ ಮಾಹಿತಿಗಳನ್ನು ಎಸ್‌ಬಿಐ ಇದೀಗ ಬಹಿರಂಗಪಡಿಸುತ್ತಿದೆ' ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್‌ 2024ರ ಫೆಬ್ರುವರಿ 15ರಂದು ಹಾಗೂ ಮಾರ್ಚ್‌ 18ರಂದು ನೀಡಿದ್ದ ಆದೇಶದಂತೆ, ಎಎಸ್‌ಬಿಐ ಎಲ್ಲ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಸಂಪೂರ್ಣ ಬ್ಯಾಂಕ್‌ ಖಾತೆ ಸಂಖ್ಯೆ ಮತ್ತು ಕೆವೈಸಿ ವಿವರ ಸೇರಿದಂತೆ ಯಾವುದೇ ಮಾಹಿತಿಯನ್ನು ರಹಸ್ಯವಾಗಿ ಇರಿಸಿಲ್ಲ ಎಂದೂ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದೆ.

ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ ಎಂದು ಫೆಬ್ರುವರಿ 15ರಂದು ಘೋಷಿಸಿದ ಬಳಿಕ, ಅಲ್ಫಾನ್ಯೂಮರಿಕ್‌ ಸಂಖ್ಯೆಗಳೂ ಸೇರಿದಂತೆ ಎಲ್ಲ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಬ್ಯಾಂಕ್‌ ಸಲ್ಲಿಸಬೇಕು. ಚುನಾವಣಾ ಆಯೋಗವು ಆ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಾರ್ಚ್‌ 18ರಂದು ಮತ್ತೊಮ್ಮೆ ಎಸ್‌ಬಿಐಗೆ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT