ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈ ದಿನಕ್ಕಾಗಿ ತಪಸ್ಸು ಮಾಡಿದ್ದೆವು: ರಾಮಮಂದಿರ ಕುರಿತು ಭಾವುಕರಾದ ಮುಸ್ಲಿಂ ಕರಸೇವಕ

Published 7 ಜನವರಿ 2024, 10:24 IST
Last Updated 7 ಜನವರಿ 2024, 10:24 IST
ಅಕ್ಷರ ಗಾತ್ರ

ಮಿರ್ಜಾಪುರ: ದೂರದ ಅಯೋಧ್ಯೆಯಿಂದ ತಮಗಾಗಿ ಬಂದ ಅಕ್ಷತೆ, ಆಮಂತ್ರಣ ಪತ್ರ ಕಂಡು 70 ವರ್ಷದ ಮುಸ್ಲಿಂ ಕರಸೇವಕ ಮೊಹಮ್ಮದ್‌ ಹಬೀಬ್‌ ಭಾವುಕರಾಗಿದ್ದಾರೆ.

ಹೌದು.... ರಾಮಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ್ದ ಹಬೀಬ್‌ ಕರಸೇವಕರಾಗಿ ಗುರುತಿಸಿಕೊಂಡಿದ್ದರು. ಡಿಸೆಂಬರ್ 2, 1992ರಲ್ಲಿ ಅಯೋಧ್ಯೆ ತಲುಪಿದ್ದ ಅವರು ಇತರ ಕರಸೇವಕರ ಜೊತೆಗೆ ನಾಲ್ಕೈದು ದಿನಗಳ ಕಾಲ ಅಯೋಧ್ಯೆಯಲ್ಲಿ ತಂಗಿರುವುದಾಗಿ ತಿಳಿಸಿದ್ದಾರೆ. ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಳಿಸಿದ್ದು, ದೇಶದೆಲ್ಲೆಡೆ ಕೋಲಾಹಲವನ್ನೇ ಸೃಷ್ಟಿಸಿತ್ತು.

‘ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ದಿನಕ್ಕಾಗಿ ನಾವು ತಪಸ್ಸು ಮಾಡಿದ್ದೆವು. ಸಾವಿರಾರು ಜನರ ಕನಸು ನನಸು ಮಾಡಲು ಯುದ್ಧವನ್ನೇ ಮಾಡಿದ್ದೇವು’ ಎಂದು ತಮ್ಮ ಹೋರಾಟದ ದಿನಗಳನ್ನು ಹಬೀಬ್‌ ನೆನಪಿಸಿಕೊಂಡಿದ್ದಾರೆ.

‘ಶ್ರೀರಾಮ ನನ್ನ ಪೂರ್ವಜ ಎಂದು ನಾನು ನಂಬಿದ್ದೇನೆ. ಪೂರ್ವಜರನ್ನು ನೆನಪಿಸಿಕೊಳ್ಳುವುದೇ ನಿಜವಾದ ಭಾರತೀಯತೆಯಲ್ಲವೇ’ ಎಂದು ಅವರು ಹೇಳಿದ್ದಾರೆ.

‘ಮಿರ್ಜಾಪುರ ಬಿಜೆಪಿ ಘಟಕದಲ್ಲಿ ಹಲವು ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿದ್ದೇನೆ. ಸುಮಾರು 32 ವರ್ಷಗಳ ನಂತರ ನಮ್ಮ ಹೋರಾಟಕ್ಕೆ ಗೆಲುವು ದಕ್ಕಿದೆ. ಹಳೆಯ ನೆನಪುಗಳೆಲ್ಲ ಮರುಕಳಿಸುತ್ತಿದೆ. 1992ರಲ್ಲಿ ಅಯೋಧ್ಯೆಯಲ್ಲಿ ನಾಲ್ಕೈದು ದಿನ ತಂಗಿದ್ದೆವು’ ಎಂದರು.

‘ಭದ್ರತಾ ದೃಷ್ಟಿಯಿಂದ ರಾಮ ಪ್ರಾಣ ಪ್ರತಿಷ್ಠಾಪನೆ ದಿನ ಅಯೋಧ್ಯೆಗೆ ಬರಬೇಡಿ ಎಂದು ಪ್ರಧಾನಿ ಮೋದಿ ಅವರು ಜನರಿಗೆ ಮನವಿ ಮಾಡಿದ್ದಾರೆ. ಆದ್ದರಿಂದ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಟಿವಿಯಲ್ಲಿ ನೋಡುತ್ತೇನೆ. ನಂತರ ದಿನಗಳಲ್ಲಿ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತೇನೆ’ ಎಂದು ತಿಳಿಸಿದರು.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಮಾರಂಭಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. ದೇಶ, ವಿದೇಶ ಸೇರಿದಂತೆ ಸುಮಾರು 6 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ರಾಮಜನ್ಮಭೂಮಿ–ಬಾಬ್ರಿ ಮಸೀದಿ ಪ್ರಕರಣದ ದಾವೆದಾರ ಇಕ್ಬಾಲ್‌ ಅನ್ಸಾರಿ ಅವರಿಗೂ ಆಹ್ವಾನ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT