ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿ ಹೆಣ್ಣೂ ಗೌರವಕ್ಕೆ ಅರ್ಹಳು: ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಕಂಗನಾ ತಿರುಗೇಟು

Published 26 ಮಾರ್ಚ್ 2024, 13:56 IST
Last Updated 26 ಮಾರ್ಚ್ 2024, 13:56 IST
ಅಕ್ಷರ ಗಾತ್ರ

ಚಂಡೀಗಢ/ ನವದೆಹಲಿ: ಕೌಟುಂಬಿಕ ಹಿನ್ನೆಲೆ, ವೃತ್ತಿಯ ಹೊರತಾಗಿ ಪ್ರತಿಯೊಬ್ಬ ಮಹಿಳೆಯೂ ಘನತೆಗೆ ಅರ್ಹಳು ಎಂದು ನಟಿ, ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್‌ ಮಂಗಳವಾರ ಹೇಳಿದರು. ಮಂಡಿ ಕ್ಷೇತ್ರದ ಬಗ್ಗೆ ಕಾಂಗ್ರೆಸ್‌ ನಾಯಕರ ಹೇಳಿಕೆಯು ವಿವಾದಾತ್ಮಕ ಸ್ವರೂಪ ಪಡೆದ ಬೆನ್ನಲ್ಲೇ ಈ ಹೇಳಿಕೆ ನೀಡಿದರು.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿಕ್ಷಕಿಯಾಗಿರಲಿ, ನಟಿಯಾಗಿರಲಿ, ಪತ್ರಕರ್ತೆಯಾಗಿರಲಿ, ರಾಜಕಾರಣಿಯಾಗಿರಲಿ ಅಥವಾ ಲೈಂಗಿಕ ಕಾರ್ಯಕರ್ತೆಯಾಗಿರಲಿ ಎಲ್ಲರೂ ಗೌರವಕ್ಕೆ ಅರ್ಹರು. ‘ಚೋಟಾ ಕಾಶಿ’ ಎಂದು ಪ್ರಸಿದ್ಧಿ ಪಡೆದಿರುವ ‘ಮಂಡಿ’ ಬಗ್ಗೆ ಅವಹೇಳನಕಾರಿ ಹೇಳಿಕೆಯು ನೋವುಂಟು ಮಾಡಿದೆ’ ಎಂದರು.

ಕಾಂಗ್ರೆಸ್‌ ನಾಯಕರಾದ ಸುಪ್ರಿಯಾ ಶ್ರೀನೇಥ್‌ ಮತ್ತು ಎಚ್‌.ಎಸ್‌.ಅಹೀರ್ ವಿರುದ್ಧ ಕ್ರಮ ಕೈಗೊಳ್ಳುವ ಯೋಚನೆ ಇದೆಯೇ ಎಂಬ ಪ್ರಶ್ನೆಗೆ, ‘ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ದೆಹಲಿಗೆ ಕರೆದಿದ್ದಾರೆ. ಅವರೊಂದಿಗಿನ ಸಭೆ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ’ ಎಂದರು. 

‘ಪಕ್ಷದ ಘನತೆಯನ್ನು ಕಾಪಾಡುತ್ತೇನೆ. ಹಿರಿಯ ನಾಯಕರ ನಡೆಯಂತೆ ನಡೆದು, ಅವರ ಸಲಹೆಗಳನ್ನು ಪಾಲಿಸುತ್ತೇನೆ’ ಎಂದು ಹೇಳಿದರು.

ಕಾನೂನಾತ್ಮಕ ಪರಿಶೀಲನೆ: ಠಾಕೂರ್‌

ಶಿಮ್ಲಾ: ಕಾಂಗ್ರೆಸ್‌ ನಾಯಕರು ಕಂಗನಾ ರನೌತ್ ಮತ್ತು ಮಂಡಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ವಿಚಾರವನ್ನು ಕಾನೂನಾತ್ಮಕವಾಗಿ ಪರಿಶೀಲಿಸಲಾಗುವುದು ಎಂದು ಹಿಮಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ಜೈ ರಾಮ್‌ ಠಾಕೂರ್‌ ಹೇಳಿದರು. ಸುಪ್ರಿಯಾ ಶ್ರೀನೇಥ್‌ ಹೇಳಿಕೆಯನ್ನು ಖಂಡಿಸಿ ‘ಸುಮಾರು 300 ದೇಗುಲಗಳಿರುವ ‘ಚೋಟಾ ಕಾಶಿ’ ಎಂದೇ ಪ್ರಸಿದ್ಧಿಯಾಗಿರುವ ಕ್ಷೇತ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ‘ದೊಡ್ಡ ತಪ್ಪು’ ಮಾಡಿದ್ದಾರೆ. ಇದರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಹೇಳಿಕೆಯಲ್ಲಿ  ತಿಳಿಸಿದ್ದಾರೆ. ‘ತಾವು ಮಹಿಳೆಯಾಗಿ ಇನ್ನೊಬ್ಬ ಮಹಿಳೆ ಬಗ್ಗೆ ಇಂಥ ಹೇಳಿಕೆ ನೀಡಿರುವುದು ದುರದೃಷ್ಟಕರ. ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ಇನ್ನೊಬ್ಬರು ಬಳಕೆ ಮಾಡುತ್ತಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್‌ ವಕ್ತಾರರು ತಪ್ಪಿನಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT