ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬಂಧನ ಸಂವಿಧಾನದ ಮೂಲ ರಚನೆಗೇ ವಿರುದ್ಧವಾದುದು: ಕೇಜ್ರಿವಾಲ್

ದೆಹಲಿ ಅಬಕಾರಿ ಹಗರಣ: ಜಾರಿ ನಿರ್ದೇಶನಾಲಯ ಕ್ರಮಕ್ಕೆ ಆಕ್ಷೇಪ
Published 27 ಮಾರ್ಚ್ 2024, 14:26 IST
Last Updated 27 ಮಾರ್ಚ್ 2024, 14:26 IST
ಅಕ್ಷರ ಗಾತ್ರ

ನವದೆಹಲಿ: ‘ಲೋಕಸಭಾ ಚುನಾವಣೆಗಳು ಘೋಷಣೆಯಾಗಿರುವ ಈ ಸಂದರ್ಭದಲ್ಲಿ ನನ್ನ ಬಂಧನ ಸಂವಿಧಾನದ ಮೂಲ ರಚನೆಗೇ ವಿರುದ್ಧವಾದುದು. ಹೀಗಾಗಿ, ದೆಹಲಿ ಅಬಕಾರಿ ಹಗರಣದ ಜೊತೆ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತನಾಗಿ ಇ.ಡಿ ವಶದಲ್ಲಿರುವ ನನ್ನನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಬೇಕು’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ದೆಹಲಿ ಹೈಕೋರ್ಟ್‌ಗೆ ಬುಧವಾರ ಒತ್ತಾಯಿಸಿದರು.

ಕೇಜ್ರಿವಾಲ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಎಂ.ಸಿಂಘ್ವಿ, ನ್ಯಾಯಮೂರ್ತಿ ಸ್ವರ್ಣಕಾಂತಾ ಶರ್ಮಾ ಅವರಿದ್ದ ಪೀಠಕ್ಕೆ ಈ ಕುರಿತು ಮನವಿ ಮಾಡಿದರು.

‘ನನ್ನನ್ನು ಬಂಧಿಸಿರುವ ಉದ್ದೇಶ, ನನ್ನ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ದಾಖಲೆಗಳನ್ನು ಪತ್ತೆ ಮಾಡುವುದು ಆಗಿಲ್ಲ, ಬದಲಾಗಿ ನನ್ನನ್ನು ಹಾಗೂ ನನ್ನ ಪಕ್ಷವನ್ನು ದುರ್ಬಲಗೊಳಿಸುವುದಾಗಿದೆ. ಹೀಗಾಗಿ, ತಕ್ಷಣವೇ ನನ್ನ ಬಿಡುಗಡೆ ಮಾಡಬೇಕು’ ಎಂದು ಕೇಜ್ರಿವಾಲ್‌ ಅರ್ಜಿಯಲ್ಲಿ ಕೋರಿದ್ದಾರೆ.

‘ಈ ಆರೋಪಕ್ಕೆ ಸಂಬಂಧಿಸಿ, ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಕೇಜ್ರಿವಾಲ್‌ ಅವರನ್ನು ಬಂಧಿಸುವ ಅಗತ್ಯ ಇರಲಿಲ್ಲ. ಅಲ್ಲದೇ, ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂಬ ಕಾರಣ ನೀಡಿ ಬಂಧಿಸಲಾಗಿದೆ. ಕಾಯ್ದೆಯಲ್ಲಿರುವ ಈ ಅವಕಾಶವನ್ನು ಇ.ಡಿ ಹೆಚ್ಚು ದುರ್ಬಳಕೆ ಮಾಡಿಕೊಂಡಿದೆ’ ಎಂದು ಸಿಂಘ್ವಿ ವಾದಿಸಿದರು.

ಇ.ಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್‌.ವಿ.ರಾಜು,‘ಪ್ರಕರಣಕ್ಕೆ ಸಂಬಂಧಿಸಿ ದೊಡ್ಡ ಅರ್ಜಿ ಮಂಗಳವಾರವಷ್ಟೆ ಕೈಸೇರಿದೆ. ಈ ವಿಚಾರವಾಗಿ ಸಂಸ್ಥೆಯ ಅಧಿಕೃತ ನಿಲುವು ತಿಳಿಸುವುದಕ್ಕೆ ಮೂರು ವಾರಗಳ ಅವಕಾಶ ನೀಡಬೇಕು’ ಎಂದು ಪೀಠಕ್ಕೆ ಕೋರಿದರು.

‘ಅರ್ಜಿದಾರರಿಗೆ ಮಧ್ಯಂತರ ರಕ್ಷಣೆ ನೀಡುವುದಕ್ಕೆ ಸಂಬಂಧಿಸಿ ಕೂಡ ಪ್ರತಿಕ್ರಿಯೆ ನೀಡಲು ಅಗತ್ಯ ಸಮಯಾವಕಾಶ ನೀಡಬೇಕು’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಂಘ್ವಿ, ‘ಪ್ರತಿಕ್ರಿಯೆ ಸಲ್ಲಿಸಲು ಉದ್ದೇಶಪೂರ್ವಕವಾಗಿ ಹೆಚ್ಚು ಸಮಯ ಕೇಳಲಾಗುತ್ತಿದೆ. ಪ್ರತಿಕ್ರಿಯೆ ಸಲ್ಲಿಸುವುದನ್ನು ವಿಳಂಬ ಮಾಡುವ ತಂತ್ರವಿದು’ ಎಂದರು.

‘ಕೇಜ್ರಿವಾಲ್‌ ಅವರ ಬಂಧನ ಪ್ರಜಾಪ್ರಭುತ್ವ, ಸಂವಿಧಾನದ ಮೂಲ ರಚನೆ ಹಾಗೂ ಸಮಾನ ಅವಕಾಶದಂತಹ ಪ್ರಶ್ನೆಗಳನ್ನು ಒಳಗೊಂಡಿದೆ. ಬಂಧನ ಅಕ್ರಮವಾಗಿದ್ದಾಗ ಕಸ್ಟಡಿಯಲ್ಲಿ ಕಳೆಯುವ ಒಂದು ಗಂಟೆ ಅವಧಿಯೂ ದೀರ್ಘವೆನಿಸುತ್ತದೆ‘ ಎಂದು ಸಿಂಘ್ವಿ ಹೇಳಿದರು.

ಇ.ಡಿ ವಶದಲ್ಲಿಂದ ನಿರ್ದೇಶನ: ತನಿಖೆಗೆ ಬಿಜೆಪಿ ಆಗ್ರಹ

‘ಜಾರಿ ನಿರ್ದೇಶನಾಲಯ (ಇ.ಡಿ) ವಶದಲ್ಲಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತನ್ನ ಸಚಿವರಿಗೆ ನಿರ್ದೇಶನ ನೀಡಿ ‘ಪತ್ರ’ಗಳನ್ನು ಬರೆಯುತ್ತಿರುವ ಕುರಿತು ತನಿಖೆ ನಡೆಸಬೇಕು’ ಎಂದು ಬಿಜೆಪಿಯ ದೆಹಲಿ ಘಟಕ ಬುಧವಾರ ಒತ್ತಾಯಿಸಿದೆ.

ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚದೇವ್‌ ನೇತೃತ್ವದ ನಿಯೋಗವೊಂದು ಪೊಲೀಸ್‌ ಕಮಿಷನರ್ ಸಂಜಯ್‌ ಅರೋರಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚದೇವ್‌ ‘ಇ.ಡಿ ವಶದಲ್ಲಿರುವ ಕೇಜ್ರಿವಾಲ್‌ ಅವರು ಬರೆದಿದ್ದಾರೆ ಎನ್ನಲಾದ ಪತ್ರಗಳ ನೈಜತೆ ಹಾಗೂ ಈ ವಿಷಯದಲ್ಲಿ ಸಚಿವರಾದ ಆತಿಶಿ ಮತ್ತು ಸೌರಭ್‌ ಭಾರದ್ವಾಜ್ ಅವರ ಪಾತ್ರ ಕುರಿತು ತನಿಖೆ ನಡೆಸುವಂತೆ ಪೊಲೀಸ್‌ ಕಮಿಷನರ್‌ಗೆ ಒತ್ತಾಯಿಸಿದ್ದೇವೆ’ ಎಂದು ತಿಳಿಸಿದರು.

‘ಇ.ಡಿ ವಶದಲ್ಲಿರುವ ವ್ಯಕ್ತಿ ಪತ್ರ ಕಳುಹಿಸಲು ಪ್ರತ್ಯೇಕ ಪ್ರಕ್ರಿಯೆಯೇ ಇದೆ. ಇಂತಹ ವ್ಯಕ್ತಿಗಳು ಬರೆಯುವ ಪತ್ರಗಳು ಸೂಕ್ತ ರೀತಿಯಲ್ಲಿ ದೃಢೀಕರಣಗೊಳ್ಳಬೇಕು’ ಎಂದ ಅವರು ‘ನನಗೆ ಬಂದಿರುವ ಮಾಹಿತಿ ಪ್ರಕಾರ ಈ ಪತ್ರಗಳು ನಕಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT