ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮನದಿ ಕರಗುವ ಸಮಯ: ಕಾಶ್ಮೀರದ ಜನರ ಜೀವನೋಪಾಯಕ್ಕೆ ಆಪತ್ತು, ವಿಜ್ಞಾನಿಗಳ ಆತಂಕ

Published 15 ಅಕ್ಟೋಬರ್ 2023, 13:17 IST
Last Updated 15 ಅಕ್ಟೋಬರ್ 2023, 13:17 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಹಿಮನದಿಗಳು ಕ್ಷಿಪ್ರಗತಿಯಲ್ಲಿ ಕರಗುತ್ತಿವೆ. ಇದು ಹಿಮಾಲಯ ಪ್ರದೇಶದಲ್ಲಿ ನೀರಿನ ಲಭ್ಯತೆ ಹಾಗೂ ಜನರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ಭೂವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 

ಇಲ್ಲಿನ ಹಿಂದೂ ಕುಶ್ ಪ್ರದೇಶದಲ್ಲಿ ವಿಸ್ತಾರವಾದ ಹಿಮನದಿಗಳಿವೆ. ಈ ಪೈಕಿ ಕಾಶ್ಮೀರದಲ್ಲಿರುವ ಕೊಲಹೊಯ್ ಅತಿದೊಡ್ಡದಾಗಿದೆ. ಝೀಲಂ ನದಿಗೆ ಇದೇ ನೀರಿನ ಮೂಲವಾಗಿದೆ. ಆದರೆ, 1962ರಿಂದ ಈ ಹಿಮನದಿಯು ಸಣ್ಣ ಭಾಗಗಳಾಗಿ ಛಿದ್ರಗೊಂಡಿದ್ದು, ಶೇ 23ರಷ್ಟು ವಿಸ್ತೀರ್ಣ ಕುಗ್ಗಿದೆ ಎಂದು ಅಧ್ಯಯನವೊಂದು ಹೇಳಿದೆ.

‘ಹಿಮನದಿಯ ಸುತ್ತಮುತ್ತ ತಾಪಮಾನ, ಅರಣ್ಯ ನಾಶ ಹೆಚ್ಚಳ ಸೇರಿದಂತೆ ಮಾನವ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿವೆ. ವಾಹನಗಳು ಮತ್ತು ಸಿಮೆಂಟ್‌ ಘಟಕಗಳಿಂದ ಹೊರಸೂಸುವ ಮಾಲಿನ್ಯವು ಇದರ ಕರಗುವಿಕೆಗೆ ಮೂಲ ಕಾರಣವಾಗಿದೆ’ ಎನ್ನುತ್ತಾರೆ ವಿಜ್ಞಾನಿಗಳು.

ಕಾಶ್ಮೀರದ ಶೇ 70ರಷ್ಟು ಜನರ ಜೀವನೋಪಾಯವು ಕೃಷಿ ಚಟುವಟಿಕೆ ಮೇಲೆ ಅವಲಂಬಿತವಾಗಿದೆ. ಬಹುತೇಕ ಪ್ರದೇಶಗಳಲ್ಲಿ ಬೇಸಾಯ ಭೂಮಿಗೆ ಈ ಹಿಮನದಿಗಳೇ ನೀರಿನ ಆಕರಗಳಾಗಿವೆ. ಹಾಗಾಗಿ, ಹಿಮ ಕರಗುವಿಕೆಯು ಈ ಪ್ರದೇಶದ ಜನರ ಸಾಮಾಜಿಕ ಹಾಗೂ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ಸರ್ಕಾರದ ಮಾಹಿತಿ ಅನ್ವಯ 2012–13ರಲ್ಲಿ ಕಾಶ್ಮೀರದಲ್ಲಿ ಭತ್ತ ಬೆಳೆಯುವ ಪ್ರದೇಶ 1,62,309 ಹೆಕ್ಟೇರ್‌ ಇತ್ತು. 2021–2022ರಲ್ಲಿ ಈ ಪ್ರದೇಶ 1,34,067 ಹೆಕ್ಟೇರ್‌ಗೆ ಕುಗ್ಗಿದೆ. ಒಟ್ಟಾರೆ ಕಳೆದ ಒಂದು ದಶಕದ ಅವಧಿಯಲ್ಲಿ 30 ಸಾವಿರ ಹೆಕ್ಟೇರ್‌ ಭೂಮಿ ಇಳಿಕೆಯಾಗಿದೆ.

‘ಜಮ್ಮು, ಕಾಶ್ಮೀರ ಮತ್ತು ಲಡಾಕ್‌ ಪ್ರದೇಶದಲ್ಲಿ 18 ಸಾವಿರ ಹಿಮನದಿಗಳಿದ್ದು, ಎಲ್ಲವೂ ಕರಗುತ್ತಿವೆ. ಕಳೆದ ಕೆಲವು ವರ್ಷಗಳಿಂದ ಕರಗುವಿಕೆ ಪ್ರಮಾಣ ಹೆಚ್ಚಳವಾಗಿದೆ’ ಎನ್ನುತ್ತಾರೆ ಹಿಮನದಿಗಳ ಸ್ವರೂಪ ಕುರಿತ ಅಧ್ಯಯನದಲ್ಲಿ ನಿರತರಾಗಿರುವ ಭೂ ವಿಜ್ಞಾನಿ ಪ್ರೊ.ಶಕೀಲ್ ರೋಮ್ಶೂ.

ಚಳಿಗಾಲದಲ್ಲಿ ಹಿಮಪಾತ ಕಡಿಮೆ ಇರುವುದೇ ಹಿಮನದಿಗಳ ಕರಗುವಿಕೆ ಪ್ರಮಾಣ ಹೆಚ್ಚಳಕ್ಕೆ ಕಾರಣ ಎನ್ನುವುದು ಅವರ ನಂಬಿಕೆ. ‘ಆದರೆ, ಉಷ್ಣಾಂಶ ಹೆಚ್ಚಿರುವ ಫೆಬ್ರುವರಿ, ಮಾರ್ಚ್‌ನಲ್ಲಿ ಹಾಗೂ ಏಪ್ರಿಲ್‌ನ ಬೇಸಿಗೆ ಅವಧಿಯಲ್ಲಿ ಹಿಮಪಾತ ಕರಗುವಿಕೆಯು ಹೆಚ್ಚಿರುತ್ತದೆ’ ಎನ್ನುತ್ತಾರೆ ಅವರು.

ಹವಾಮಾನ ಬದಲಾವಣೆಯು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಇದು ವಿಶ್ವದಾದ್ಯಂತ ಹಿಮನದಿಗಳು ಮತ್ತು ಹಿಮ ಕವಚಗಳ ಕರಗುವಿಕೆಗೆ ಮೂಲ ಕಾರಣವಾಗಿದೆ. ಮತ್ತೊಂದೆಡೆ ಸಮುದ್ರಮಟ್ಟ ಹೆಚ್ಚಳ, ಪ್ರವಾಹ ಹಾಗೂ ಜಲಕ್ಷಾಮಕ್ಕೂ ಕಾರಣವಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

‘ಸಂಶೋಧನೆಯ ಪ್ರಕಾರ 21ನೇ ಶತಮಾನದ ಅಂತ್ಯದಲ್ಲಿ ಜಾಗತಿಕ ತಾಪಮಾನ 4ರಿಂದ 7ರಷ್ಟು ಹೆಚ್ಚಳವಾಗುತ್ತದೆ. ಇಂಗಾಲದ ಹೊರಸೂಸುವಿಕೆಯೂ ಉಲ್ಬಣಿಸಿದೆ. ಹಾಗಾಗಿ, ಇದರ ಪ್ರಮಾಣ ತಗ್ಗಿಸದ ಹೊರತು ಹಿಮನದಿಗಳ ಕರಗುವಿಕೆಯನ್ನು ತಡೆಯಲು ಸಾಧ್ಯವಿಲ್ಲ’ ಎಂದು ವಿವರಿಸುತ್ತಾರೆ ಕಾಶ್ಮೀರ ವಿ.ವಿಯ ಭೂ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಇರ್ಫಾನ್ ರಶೀದ್. 

ಕಾಶ್ಮೀರ ಕಣಿವೆಯಲ್ಲಿ ಕಳೆದ ವರ್ಷ ಹಿಮನದಿಗಳ ಕರಗುವಿಕೆ ಪ್ರಕ್ರಿಯೆಯು ಹೆಚ್ಚಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಕೊಂಚ ತಗ್ಗಿದೆ.
–ಪ್ರೊ.ಶಕೀಲ್ ರೋಮ್ಶೂ ಭೂ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT