ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್‌ಗೆ ಜೀವಕ್ಕೆ ಕುತ್ತು ತರುವ ಸಮಸ್ಯೆ ಇದ್ದಂತಿಲ್ಲ: ಕೋರ್ಟ್‌

Published 6 ಜೂನ್ 2024, 15:29 IST
Last Updated 6 ಜೂನ್ 2024, 15:29 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದ ಭಾಗವಾಗಿ ಕೈಗೊಂಡ ಪ್ರವಾಸ ಹಾಗೂ ಅದಕ್ಕೆ ಸಂಬಂಧಿಸಿ ನಡೆಸಿದ ಕಾರ್ಯಕ್ರಮಗಳನ್ನು ಗಮನಿಸಿದರೆ ಅವರು ‘ಜೀವಕ್ಕೆ ಕುತ್ತು ಎದುರಾಗುವಂತಹ’ ಕಾಯಿಲೆಗಳಿಂದ ಬಳಲುತ್ತಿರುವಂತೆ ಕಾಣುತ್ತಿಲ್ಲ ಎಂದು ಅವರಿಗೆ ಮಧ್ಯಂತರ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ದೆಹಲಿ ನ್ಯಾಯಾಲಯವೊಂದು ಹೇಳಿದೆ.

ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಜ್ರಿವಾಲ್ ಅವರಿಗೆ ವೈದ್ಯಕೀಯ ಕಾರಣಕ್ಕೆ ಮಧ್ಯಂತರ ಜಾಮೀನು ನೀಡಲು ನ್ಯಾಯಾಲಯವು ಬುಧವಾರ ನಿರಾಕರಿಸಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜೂನ್ 19ರವರೆಗೆ ವಿಸ್ತರಿಸಿದ್ದಾರೆ.

‘ಕೇಜ್ರಿವಾಲ್ ಅವರು ತಮಗೆ ಬಾಧಿಸಬಹುದಾದ ಕಾಯಿಲೆಯೊಂದರ ಪತ್ತೆಗೆ ಮಧ್ಯಂತರ ಜಾಮೀನು ಕೇಳಿದ್ದಾರೆ. ಆದರೆ ಬಂಧನದಲ್ಲಿ ಇರುವಾಗಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಇರುವಾಗ, ಮಧ್ಯಂತರ ಜಾಮೀನು ಕೋರಲು ಇದು ಆಧಾರವಾಗಿ ಒದಗಿಬರುವುದಿಲ್ಲ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಕೇಜ್ರಿವಾಲ್ ಅವರು ಬಂಧನದಲ್ಲಿ ಇರುವಾಗ ಅವರ ವೈದ್ಯಕೀಯ ಅಗತ್ಯಗಳ ಬಗ್ಗೆ ಗಮನ ಹರಿಸಬೇಕು ಎಂದು ನ್ಯಾಯಾಧೀಶರು ತಿಹಾರ್ ಜೈಲಿನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಕೇಜ್ರಿವಾಲ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ಕಳವಳಗಳ ಬಗ್ಗೆ ತಕ್ಷಣ ಸ್ಪಂದಿಸಬೇಕಿದೆ. ಹೀಗಾಗಿ, ಕೇಜ್ರಿವಾಲ್ ಅವರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ, ಏಪ್ರಿಲ್‌ 22ರ ಆದೇಶದ ಅನುಸಾರ ರಚನೆಯಾದ ಏಮ್ಸ್‌ನ ವೈದ್ಯಕೀಯ ಮಂಡಳಿಯನ್ನು ಮತ್ತೆ ಸಕ್ರಿಯಗೊಳಿಸುವುದು ಅಗತ್ಯ ಎಂದು ಏಮ್ಸ್‌ ನಿರ್ದೇಶಕರಿಗೆ ಅನ್ನಿಸಿದಲ್ಲಿ, ಅವರು ಆ ಕೆಲಸ ಮಾಡಬೇಕು’ ಎಂದು ಆದೇಶದಲ್ಲಿ ಹೇಳಲಾಗಿದೆ.

ವೈದ್ಯಕೀಯ ಮಂಡಳಿಯು ಕೇಜ್ರಿವಾಲ್ ಅವರನ್ನು ತಪಾಸಣೆಗೆ ಒಳಪಡಿಸಿ, ಅಗತ್ಯ ವೈದ್ಯಕೀಯ ಪರೀಕ್ಷೆಗಳಿಗೆ ಮೂರು ದಿನಗಳಲ್ಲಿ ಶಿಫಾರಸು ಮಾಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ಮಂಡಳಿಯು ಸೂಚಿಸುವ ಪರೀಕ್ಷೆಗಳು ವಿಳಂಬ ಇಲ್ಲದೆ ಆಗುವಂತೆ ನೋಡಿಕೊಳ್ಳುವ ಕೆಲಸವನ್ನು ಜೈಲು ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT