ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Delhi Chalo | FIR ದಾಖಲಿಸದ ಹೊರತೂ ಶುಭಕರಣ್ ಸಿಂಗ್ ಅಂತ್ಯಸಂಸ್ಕಾರವಿಲ್ಲ- SKM

Published 23 ಫೆಬ್ರುವರಿ 2024, 11:20 IST
Last Updated 23 ಫೆಬ್ರುವರಿ 2024, 11:20 IST
ಅಕ್ಷರ ಗಾತ್ರ

ಚಂಡೀಗಢ: ‘ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರು ಆಯೋಜಿಸಿರುವ ದೆಹಲಿ ಚಲೋ ಜಾಥಾ ಸಂದರ್ಭದಲ್ಲಿ ಪಂಜಾಬ್‌ನ ರೈತರು ಹಾಗೂ ಹರಿಯಾಣ ಪೊಲೀಸರ ನಡುವಿನ ಘರ್ಷಣೆಯಲ್ಲಿ ಮೃತಪಟ್ಟ ಶುಭಕರಣ್ ಸಿಂಗ್ ಅವರ ಅಂತ್ಯಸಂಸ್ಕಾರ ನೆರವೇರಬೇಕೆಂದರೆ ಪಂಜಾಬ್ ಸರ್ಕಾರ ಪ್ರಕರಣ ದಾಖಲಿಸಬೇಕು’ ಎಂದು ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್ ಅವರು ಮೃತ ಶುಭಕರಣ್ ಅವರ ಕುಟುಂಬಕ್ಕೆ ₹1ಕೋಟಿ ಪರಿಹಾರ ಮತ್ತು ಅವರ ಸೋದರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದ್ದರು. 

ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳ ಗಡಿ ಭಾಗವಾದ ಖನೌರಿ ಬಳಿ ರೈತರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಬಟಿಂಡಾ ಮೂಲದವರಾದ ಶುಭಕರಣ್ (21) ಬುಧವಾರ ಮೃತಪಟ್ಟಿದ್ದರು. ಘಟನೆಗೆ ಕಾರಣರದವರ ವಿರುದ್ಧ ಪಂಜಾಬ್ ಸರ್ಕಾರ ಪ್ರಕರಣ ದಾಖಲಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.

ವೈದ್ಯಾಧಿಕಾರಿ ಪ್ರಕಾರ ಶುಭಕರಣ್ ಅವರ ತಲೆಗೆ ಗಾಯವಾಗಿದೆ. ಆದರೆ ಬೇಡಿಕೆ ಈಡೇರಿಸುವವರೆಗೂ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಸರವನ್ ಸಿಂಗ್‌ ಪಂಧೇರ್, ‘ಶುಭಕರಣ್ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಂಜಾಬ್ ಮುಖ್ಯಮಂತ್ರಿ ಮಾನ್ ಭರವಸೆ ನೀಡಿದ್ದಾರೆ. ಆದರೆ ಅದು ಈಗ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇದು 2 ದಿನದಲ್ಲಾದರೂ ಬಗೆಹರಿಯಬಹುದು ಅಥವಾ 10 ದಿನಗಳಾದರೂ ಆಗಬಹುದು ಎಂದು ಶುಭಕರಣ್ ಅವರ ಕುಟುಂಬಕ್ಕೆ ಈಗಾಗಲೇ ತಿಳಿಸಲಾಗಿದೆ. ನಮಗೆ ಹಣ ಮುಖ್ಯವಲ್ಲ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಆಗ ಮಾತ್ರ ಅಂತ್ಯಸಂಸ್ಕಾರ ನೆರವೇರಲಿದೆ. ಆದರೆ ಪಂಜಾಬ್ ಸರ್ಕಾರವು ತಾವು ಹೇಳಿದಂತೆ ಒಪ್ಪಿಕೊಳ್ಳುವಂತೆ ಶುಭಕರಣ್ ಕುಟುಂಬದ ಮೇಲೆ ಒತ್ತಡ ಹೇರುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಹರಿಯಾಣ ಭದ್ರತಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಬಟಿಂಡಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಪ್ರಕರಣ ದಾಖಲಿಸದಿದ್ದರೆ ಇವರು ಹೇಗೆ ಪಂಜಾಬ್‌ನ ರಕ್ಷಕರಾಗುತ್ತಾರೆ’ ಸಂಯುಕ್ತ ಕಿಸಾನ್ ಮೋರ್ಚಾದ ಜಗಜೀತ್ ಸಿಂಗ್ ದಲ್ಲೇವಾಲ ಪ್ರಶ್ನಿಸಿದ್ದಾರೆ.

‘ರೈತರ ಹೋರಾಟದಲ್ಲಿ ಯುವಕನೊಬ್ಬ ಮಡಿದಿದ್ದಾನೆ. ಆತನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕಾದ್ದು ನಮ್ಮ ಪರಮೋಚ್ಛ ಗುರಿ. ನಾವು ಆ ನಿಟ್ಟಿನಲ್ಲಿ ಗಮನ ಹರಿಸಿದ್ದೇವೆ. ನಮಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನ್ಯಾಯ ದೊರಕಿಸಿಕೊಡುವುದು ಪಂಜಾಬ್ ಸರ್ಕಾರದ ಜವಾಬ್ದಾರಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT