ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Delhi Chalo | ಮೃತ ರೈತನಿಗಿದ್ದಿದ್ದು ಮಾನಸಿಕ ಅಸ್ವಸ್ಥ ತಂದೆ, ಸೋದರಿ ಮತ್ತು ಸಾಲ

Published 22 ಫೆಬ್ರುವರಿ 2024, 10:14 IST
Last Updated 22 ಫೆಬ್ರುವರಿ 2024, 10:14 IST
ಅಕ್ಷರ ಗಾತ್ರ

ಚಂಡೀಗಢ: ರೈತರ ಚಳವಳಿಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ನ ಭಟಿಂಡಾ ಜಿಲ್ಲೆಯ ಬಾಲೋಕೆ ಗ್ರಾಮದಿಂದ ಹೊರಟ ಶುಭಕರಣ್ ಸಿಂಗ್ ಎಂಬ 21 ವರ್ಷದ ಯುವಕ, ಪಂಜಾಬ್ ಹಾಗೂ ಹರಿಯಾಣ ಗಡಿಭಾಗದ ಖನೌರಿಯಲ್ಲಿ ರೈತರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ.

ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಮರಣೋತ್ತರ ಪರೀಕ್ಷೆಗೆ ತಡೆಯೊಡ್ಡಿರುವ ರೈತರು, ಮೃತರ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ನಗದು ನೀಡುವ ಬದಲು, ಕೇಂದ್ರ ಸರ್ಕಾರದಲ್ಲಿ ಅವರ ಕುಟುಂಬ ಸದಸ್ಯರೊಬ್ಬರಿಗೆ ನೌಕರಿ ಕೊಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

‘ಶುಭಕರಣ್ ಕುಟುಂಬಕ್ಕಿರುವುದು 2 ಎಕರೆ ಜಾಗ ಮಾತ್ರ. ಅವರ ತಾಯಿ ಮೃತಪಟ್ಟಿದ್ದಾರೆ. ತಂದೆ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಇಬ್ಬರು ಸೋದರಿಯರು ಇದ್ದು, ಒಬ್ಬರಿಗೆ ಮದುವೆಯಾಗಿದೆ. ಮತ್ತೊಬ್ಬರು ವಿದ್ಯಾರ್ಥಿನಿ. ಸೋದರಿಯ ಮದುವೆಗಾಗಿ ಮಾಡಿದ ಸಾಲ ಈ ಯುವ ರೈತನ ಮೇಲಿತ್ತು’ ಎಂದು ನೆರೆಹೊರೆಯವರು ಹೇಳಿದ್ದಾರೆ.

ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೆಹಲಿ ಚಲೋ ಚಳವಳಿ ಹಮ್ಮಿಕೊಂಡಿದ್ದಾರೆ. ಇದರಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತ್ರಿ ನೀಡಬೇಕೆಂಬುದು ಒಳಗೊಂಡು, ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ಬೆಳೆ ವಿಮೆ ಸೌಲಭ್ಯಕ್ಕೂ ಆಗ್ರಹಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸದಂತೆ ಗಡಿಯಲ್ಲಿ ಪೊಲೀಸರು ತಡೆಬೇಲಿ ಹಾಕಿ ತಡೆಯೊಡ್ಡಿದ್ದಾರೆ. ತಡೆಬೇಲಿಯಿಂದ ರೈತರನ್ನು ದೂರವಿಡಲು ನಿರಂತರವಾಗಿ ಅಶ್ರುವಾಯು ಪ್ರಯೋಗವನ್ನು ಪೊಲೀಸರು ಮಾಡುತ್ತಿದ್ದಾರೆ. ಬುಧವಾರ ನಡೆದ ಘರ್ಷಣೆಯಲ್ಲಿ ರಬ್ಬರ್‌ ಗುಂಡುಗಳನ್ನೂ ಬಳಸಲಾಗಿತ್ತು ಎಂದು ರೈತರು ಆರೋಪಿಸಿದ್ದಾರೆ. ಮತ್ತೊಂದೆಡೆ ಘರ್ಷಣೆಯಲ್ಲಿ ರೈತರು ಕಲ್ಲು ಮತ್ತು ದೊಣ್ಣೆಗಳನ್ನು ಎಸೆದ ಪರಿಣಾಮ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಪೊಲೀಸರು ದೂರಿದ್ದಾರೆ.

ರೈತ ಮುಖಂಡ ಜಗಜೀತ್ ಸಿಂಗ್ ದಲ್ಲೇವಾಲ ಅವರು ಪ್ರತಿಕ್ರಿಯಿಸಿ, ‘ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ರೈತರು ಮತ್ತು ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಹರಿಯಾಣ ಪೊಲೀಸರು ರೈತರ ಮೇಲೆ ಬಲಪ್ರಯೋಗ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಸರ್ಕಾರದ ಭರವಸೆಯು ರೈತರಿಗೆ ಕೇವಲ ಜೀವನಾಧಾರ ನೀಡಬಲ್ಲದೇ ಹೊರತು, ಆದಾಯವನ್ನಲ್ಲ. ಹೀಗಾಗಿ ಇದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ರೈತರು ಆರೋಪಿಸಿ, ಸರ್ಕಾರದ ಪ್ರಸ್ತಾವನೆಯನ್ನು ನಿರಾಕರಿಸಿದ್ದಾರೆ. ಈ ನಡುವೆ ಶುಭಕರಣ್ ಅವರ ಸಾವಿನಿಂದಾಗಿ ರೈತರು ಮುಷ್ಕರವನ್ನು 2 ದಿನ ಸ್ಥಗಿತಗೊಳಿಸಿದ್ದು, ಮುಂದಿನ ನಡೆ ಕುರಿತು ಯೋಜನೆ ರೂಪಿಸುತ್ತಿದ್ದಾರೆ’ ಎಂದೆನ್ನಲಾಗಿದೆ.

‘ಪಂಜಾಬ್ ಸರ್ಕಾರವು ಶುಭಕರಣ್ ಅವರನ್ನು ಹುತಾತ್ಮ ಎಂದು ಘೋಷಿಸಬೇಕು. ಅದಕ್ಕೆ ತಕ್ಕಂತೆ ಅವರ ಕುಟುಂಬಕ್ಕೆ ನೆರವು ನೀಡಬೇಕು. ಮರಣೋತ್ತರ ಪರೀಕ್ಷೆ ನಡೆಸಲು ಐದು ಸದಸ್ಯರ ಮಂಡಳಿಯನ್ನು ಸರ್ಕಾರ ರಚಿಸಬೇಕು’ ಎಂದು ದಲ್ಲೇವಾಲ ಆಗ್ರಹಿಸಿದ್ದಾರೆ.

ಶುಭಕರಣ್ ಅವರ ಸಾವು ಈಗ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಯುವ ರೈತನ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಆಗ್ರಹಿಸಿದ್ದಾರೆ. ಇದು ಪಂಜಾಬ್ ಮತ್ತು ಹರಿಯಾಣ ನಡುವಿನ ವಾಕ್‌ಸಮರಕ್ಕೆ ಕಾರಣವಾಗಿದೆ.

ಶಿರೋಮಣಿ ಅಕಾಲಿದಳದ ಮುಖಂಡ ಸುಖಬೀರ್ ಸಿಂಗ್ ಬಾದಲ್ ಮತ್ತು ಕಾಂಗ್ರೆಸ್ ಮುಖಂಡ ಅಮರೀಂದರ್ ರಾಜಾ ಸಿಂಗ್ ಅವರು ಮುಖ್ಯಮಂತ್ರಿ ಭಗವಂತ ಮಾನ್ ವಿರುದ್ಧ ಕಿಡಿಯಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT