ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರ ಪ್ರತಿಭಟನೆ | ಖಾತೆಗಳ ನಿರ್ಬಂಧ; ಅಭಿವ್ಯಕ್ತಿ ಸ್ವಾತಂತ್ರ ಧಕ್ಕೆ: ಎಕ್ಸ್

Published 22 ಫೆಬ್ರುವರಿ 2024, 5:07 IST
Last Updated 22 ಫೆಬ್ರುವರಿ 2024, 5:07 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತ ಸರ್ಕಾರದ ಆದೇಶದ ಬಳಿಕ ಕೆಲವು ಖಾತೆಗಳು ಮತ್ತು ಪೋಸ್ಟ್‌ಗಳನ್ನು ತೆಗೆದುಹಾಕಲಾಗಿದೆ’ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್‌’ ಗುರುವಾರ ತಿಳಿಸಿದೆ.

ಗೃಹ ಸಚಿವಾಲಯದ ಕೋರಿಕೆಯ ಮೇರೆಗೆ ರೈತ ಪ್ರತಿಭಟನೆಗೆ ಸಂಬಂಧಿಸಿದ 177 ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ‘ಎಕ್ಸ್‌’ಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ. 

ಅದಾಗ್ಯೂ, ‘ಎಕ್ಸ್‌’ ವೇದಿಕೆಯು ಯಾರ ಖಾತೆಗಳು ಮತ್ತು ಪೋಸ್ಟ್‌ಗಳನ್ನು ತೆಗೆದುಹಾಕಲಾಗಿದೆ ಎಂಬುದರ ವಿವರಗಳನ್ನು ನೀಡಿಲ್ಲ. ‘ಆದರೆ, ಈ ಕಾರ್ಯವನ್ನು ನಾವು ಒಪ್ಪುವುದಿಲ್ಲ ಮತ್ತು ಈ ಕ್ರಮವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ’ ಎಂದು ಅದು ಹೇಳಿದೆ.

‘ಭಾರತ ಸರ್ಕಾರವು ‘ಎಕ್ಸ್‌’ನ ನಿರ್ದಿಷ್ಟ ಖಾತೆಗಳು ಮತ್ತು ಪೋಸ್ಟ್‌ಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಿದೆ. ತಪ್ಪಿದಲ್ಲಿ ದಂಡ ಮತ್ತು ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದೆ. ನಾವು ಭಾರತದಲ್ಲಿ ಮಾತ್ರ ಈ ಖಾತೆಗಳು ಮತ್ತು ಪೋಸ್ಟ್‌ಗಳನ್ನು ನಿರ್ಬಂಧಿಸುತ್ತೇವೆ. ಆದರೆ ಈ ಕ್ರಮಗಳನ್ನು ನಾವು ಒಪ್ಪುವುದಿಲ್ಲ ಮತ್ತು ಈ ಪೋಸ್ಟ್‌ಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಂದುವರಿಸಬೇಕು ಎಂಬುದನ್ನು ಸಮರ್ಥಿಸುತ್ತೇವೆ’ ಎಂದು ‘ಎಕ್ಸ್‌’ನ ‘ಗ್ಲೋಬಲ್‌ ಗವರ್ನ್‌ಮೆಂಟ್ ಅಫೇರ್ಸ್‌’ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ. 

ಆದರೆ ಈ ಕುರಿತು ಒಳಾಡಳಿತ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಖಂಡಿಸಿದೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ‘ಇದು ಪ್ರಜಾಪ್ರಭುತ್ವದ ಕೊಲೆ’ ಎಂದು ಆರೋಪಿಸಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹಾಗೂ ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ನಡುವೆ ರೈತರ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಬುಧವಾರ ಬಿರುಸು ಪಡೆದುಕೊಂಡಿತ್ತು. ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಪಂಜಾಬಿನ 21 ವರ್ಷದ ಯುವ ರೈತ ಮೃತಪಟ್ಟು, ಕೆಲ ರೈತರು ಮತ್ತು 12 ಪೊಲೀಸರು ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ರೈತ ಮುಖಂಡರು ‘ದೆಹಲಿ ಚಲೋ’ಗೆ ಎರಡು ದಿನಗಳ ಮಟ್ಟಿಗೆ ವಿರಾಮ ನೀಡಿದ್ದಾರೆ.

ಪ್ರತಿಭಟನೆಗೆ ಸಂಬಂಧಿಸಿ ಮುಂದಿನ ಕ್ರಮಗಳ ಕುರಿತು ಶುಕ್ರವಾರ ಸಂಜೆ ನಿರ್ಧರಿಸಲಾಗುವುದು ಎಂದು ರೈತ ಮುಖಂಡ ಸರವಣ ಸಿಂಗ್‌ ಪಂಢೇರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT