ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು –ಪೊಲೀಸರ ನಡುವೆ ಸಂಘರ್ಷ: ರೈತ ಸಾವು, ‘ದೆಹಲಿ ಚಲೋ’ಗೆ ವಿರಾಮ

Published 21 ಫೆಬ್ರುವರಿ 2024, 15:28 IST
Last Updated 21 ಫೆಬ್ರುವರಿ 2024, 15:28 IST
ಅಕ್ಷರ ಗಾತ್ರ

ಚಂಡೀಗಢ: ಪುನರಾರಂಭವಾದ ರೈತರ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಬುಧವಾರ ಬಿರುಸು ಪಡೆದುಕೊಂಡಿತು. ರೈತರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು. ಘರ್ಷಣೆಯಲ್ಲಿ ಪಂಜಾಬಿನ 21 ವರ್ಷದ ಯುವ ರೈತ ಮೃತಪಟ್ಟು, ಕೆಲ ರೈತರು ಮತ್ತು 12 ಪೊಲೀಸರು ಗಾಯಗೊಂಡರು. ಇದರ ಬೆನ್ನಲ್ಲೇ ರೈತ ಮುಖಂಡರು ‘ದೆಹಲಿ ಚಲೋ’ವನ್ನು ಎರಡು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಿದ್ದಾರೆ. 

ಪ್ರತಿಭಟನೆಗೆ ಸಂಬಂಧಿಸಿ ಮುಂದಿನ ಕ್ರಮಗಳ ಕುರಿತು ಶುಕ್ರವಾರ ಸಂಜೆ ನಿರ್ಧರಿಸಲಾಗುವುದು ಎಂದು ರೈತ ಮುಖಂಡ ಸರವಣ ಸಿಂಗ್‌ ಪಂಢೇರ್ ಹೇಳಿದ್ದಾರೆ. ಈ ವಿರಾಮದ ಸಮಯದಲ್ಲಿ ಸಹಸ್ರಾರು ರೈತರು ಗಡಿಗಳಲ್ಲಿಯೇ ಬಿಡಾರ ಹೂಡಲಿದ್ದಾರೆ.

ಪಂಜಾಬ್‌ ಮತ್ತು ಹರಿಯಾಣ ಗಡಿಭಾಗವಾದ ಶಂಭು ಮತ್ತು ಖನೌರಿ ಭಾಗದಲ್ಲಿ ಪ್ರತಿಭಟನೆನಿರತ ರೈತರು ಬ್ಯಾರಿಕೇಡ್‌ಗಳತ್ತ ಮುನ್ನುಗ್ಗಲು ಯತ್ನಿಸಿದಾಗ, ಅವರನ್ನು ಚದುರಿಸಲು ಹರಿಯಾಣ ಪೊಲೀಸರು ಮೂರು ಸುತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಇದಕ್ಕೆ ಅವರು ಡ್ರೋನ್‌ ಅನ್ನೂ ಬಳಸಿದರು.

ಅಶ್ರುವಾಯು ಶೆಲ್ ದಾಳಿಯಿಂದ ತಪ್ಪಿಸಿಕೊಳ್ಳಲು ರೈತರು ಚದುರಿದಂತೆ ಓಡಿದಾಗ, ಕೆಲವರಿಗೆ ಗಾಯಗಳಾಗಿವೆ. ಹೊಗೆಯಿಂದ ರಕ್ಷಿಸಿಕೊಳ್ಳಲು ಹಲವರು ಮಾಸ್ಕ್‌ ಮತ್ತು ಕನ್ನಡಕಗಳನ್ನು ಧರಿಸಿದ್ದರು. ಪೊಲೀಸರು ರಬ್ಬರ್‌ ಬುಲೆಟ್‌ಗಳನ್ನೂ ಹಾರಿಸಿದ್ದಾರೆ ಎಂದು ರೈತರು ದೂರಿದರು.

ಖನೌರಿಯಲ್ಲಿ ನಡೆದ ಘರ್ಷಣೆಯಲ್ಲಿ ಮೃತಪಟ್ಟ ರೈತನನ್ನು ಪಂಜಾಬಿನ ಬಠಿಂಡಾ ಜಿಲ್ಲೆಯ ಬಾಲೋಕೆ ಗ್ರಾಮದ ನಿವಾಸಿ ಸುಭಕರನ್‌ ಸಿಂಗ್‌ (21) ಎಂದು ಗುರುತಿಸಲಾಗಿದೆ ಎಂದು ರೈತ ಮುಖಂಡ ಬಲದೇವ್‌ ಸಿಂಗ್‌ ಸಿರ್ಸಾ ತಿಳಿಸಿದರು. ಫೆ. 13ರಿಂದ ಆರಂಭವಾದ ‘ದೆಹಲಿ ಚಲೋ’ ಮೆರವಣಿಗೆ ನಂತರ ನಡೆದ ಘರ್ಷಣೆಯಲ್ಲಿ ಸಂಭವಿಸಿದ ಮೊದಲ ಸಾವು ಇದಾಗಿದೆ ಎಂದು ಅವರು ಹೇಳಿದರು.

‘ಘರ್ಷಣೆಯಲ್ಲಿ ಗಾಯಗೊಂಡ ಮೂವರನ್ನು ಪಟಿಯಾಲದ ರಾಜೇಂದ್ರ ಆಸ್ಪತ್ರೆಗೆ ಕರೆತರಲಾಯಿತು. ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಎಚ್‌.ಎಸ್‌.ರೇಖಿ ಸುದ್ದಿಗಾರರಿಗೆ ತಿಳಿಸಿದರು. ಲಾಠಿ ಮತ್ತು ಕಲ್ಲು ತೂರಾಟದಿಂದ ಸುಮಾರು 12 ಪೊಲೀಸರು ಗಾಯಗೊಂಡಿದ್ದಾರೆ ಎಂದು ಹರಿಯಾಣ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸರ್ಕಾರದೊಂದಿಗೆ ನಡೆಸಿದ ನಾಲ್ಕನೇ ಸುತ್ತಿನ ಮಾತುಕತೆ ವಿಫಲವಾದ ಎರಡು ದಿನಗಳ ಬಳಿಕ ಸಹಸ್ರಾರು ರೈತರು ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು ಪುನರಾರಂಭಿಸಿದ್ದರು. ವಾರದಿಂದಲೇ ಟ್ರ್ಯಾಕ್ಟರ್‌, ಟ್ರಾಲಿ, ಮಿನಿ ವ್ಯಾನ್‌ಗಳು ಮತ್ತು ಪಿಕಪ್‌ ಟ್ರಕ್‌ಗಳೊಂದಿಗೆ ಗಡಿ ಭಾಗಗಳಲ್ಲಿ ಬಂದು ರೈತರು ಜಮಾಯಿಸಿದ್ದರು. 

ಐದನೇ ಸುತ್ತಿನ ಮಾತುಕತೆಗೆ ಆಹ್ವಾನ: ರೈತರ ಪ್ರತಿಭಟನೆಯ ಕಾವು ಜೋರಾದ ಬೆನ್ನಲ್ಲೇ ‘ಎಂಎಸ್‌ಪಿ ಸೇರಿದಂತೆ ಎಲ್ಲ ಬಗೆಯ ಸಮಸ್ಯೆಗಳ ಕುರಿತು ಚರ್ಚಿಸಲು ಸರ್ಕಾರದ ಜತೆಗೆ ಐದನೇ ಸುತ್ತಿನ ಮಾತುಕತೆಗೆ ರೈತ ಮುಖಂಡರು ಬರಬೇಕು’ ಎಂದು ಕೃಷಿ ಸಚಿವ ಅರ್ಜುನ್‌ ಮುಂಡಾ ಆಹ್ವಾನಿಸಿದರು.

ಇದೇ ವೇಳೆ, ಪ್ರತಿಭಟನೆ ಸಂದರ್ಭದಲ್ಲಿ ಶಾಂತಿ ಕಾಪಾಡುವಂತೆ ರೈತ ಮುಖಂಡರು ರೈತರನ್ನು ಕೋರಿದರು. ‘ನೀವು ಈ ಹೋರಾಟದಲ್ಲಿ ಗೆಲ್ಲಲು ಬಯಸಿದ್ದರೆ ಶಾಂತಿ ಕಾಯ್ದುಕೊಳ್ಳಿ’ ಎಂದು ಎಸ್‌ಕೆಎಂ (ರಾಜಕೀಯೇತರ) ನಾಯಕ ಜಗಜೀತ್‌ ಸಿಂಗ್ ಡಲ್ಲೆವಾಲ್‌ ಹೇಳಿದರು. 

ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಡಲ್ಲೆವಾಲ್‌, ‘ಶಾಂತಿ ಕದಡುವುದು ನಮ್ಮ ಉದ್ದೇಶವಲ್ಲ. ಸರ್ಕಾರ ವಿಳಂಬ ನೀತಿ ಅನುಸರಿಸದೇ, ರೈತರ ಪರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಜೆಸಿಬಿ ನೀಡದಿರಲು ಪೊಲೀಸರ ಸೂಚನೆ

ಪ್ರತಿಭಟನೆನಿರತ ರೈತರಿಗೆ ತಮ್ಮ ಜೆಸಿಬಿ, ಪೋಕ್ಲೇನ್‌, ಹಿಟಾಚಿ, ಬುಲ್ಡೋಜರ್‌ನಂತಹ ಯಂತ್ರಗಳನ್ನು ನೀಡದಂತೆ ಅವುಗಳ ಮಾಲೀಕರು ಮತ್ತು ನಿರ್ವಾಹಕರಿಗೆ ಹರಿಯಾಣ ಪೊಲೀಸರು ಸೂಚಿಸಿದ್ದಾರೆ. ಒಂದು ವೇಳೆ ಅವುಗಳನ್ನು ನೀಡಿದ್ದರೆ ಕೂಡಲೇ ಹಿಂತೆಗೆದುಕೊಳ್ಳಿ. ಈ ಯಂತ್ರಗಳಿಂದ ಭದ್ರತಾ ಪಡೆಗಳಿಗೆ ಹಾನಿ ಉಂಟಾಗಬಹುದು. ಹಾಗಾದಲ್ಲಿ ಅದು ಜಾಮೀನುರಹಿತ ಅಪರಾಧವಾಗುತ್ತದೆ. ಆಗ ಕ್ರಿಮಿನಲ್‌ ಪ್ರಕರಣ ಹೂಡಬಹುದಾಗಿರುತ್ತದೆ ಎಂದು ಎಚ್ಚರಿಸಿ ಪೊಲೀಸರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ರೈತರು ಮತ್ತು ಸರ್ಕಾರದ ನಡುವೆ ಇಲ್ಲಿಯವರೆಗೆ ನಾಲ್ಕು ಸುತ್ತಿನ ಮಾತುಕತೆಗಳು ನಡೆದಿದ್ದು, ಯಾವುದೂ ಫಲಪ್ರದವಾಗಿಲ್ಲ. ‌ನಾಲ್ಕನೇ ಸುತ್ತಿನ ಮಾತುಕತೆ ವೇಳೆ, ದ್ವಿದಳ ಧಾನ್ಯಗಳು, ಮೆಕ್ಕೆಜೋಳ, ಹತ್ತಿಯನ್ನು ಐದು ವರ್ಷಗಳ ಕಾಲ ಸರ್ಕಾರಿ ಸಂಸ್ಥೆಗಳಿಂದ ಎಂಎಸ್‌ಪಿ ದರದಲ್ಲಿ ಖರೀದಿಸುವ ಕೇಂದ್ರದ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT