ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಧರಣಿ: ಶಂಭು, ಖನೌರಿ ಗಡಿಯಲ್ಲಿ ಗುಂಪು ಚದುರಿಸಲು ಅಶ್ರುವಾಯು ಪ್ರಯೋಗ

Published 21 ಫೆಬ್ರುವರಿ 2024, 13:23 IST
Last Updated 21 ಫೆಬ್ರುವರಿ 2024, 13:23 IST
ಅಕ್ಷರ ಗಾತ್ರ

ಚಂಡೀಗಢ: ರೈತರ ಬೇಡಿಕೆ ಈಡೇರಿಸುವಂತೆ ಪಂಜಾಬ್‌ನ ಗಡಿ ಪ್ರದೇಶಗಳಾದ ಶಂಭು ಹಾಗೂ ಖನೌರಿ ಗಡಿಯಲ್ಲಿ ಜಮಾಯಿಸಿರುವ ರೈತರ ಗುಂಪನ್ನು ಚದುರಿಸಲು ಪೊಲೀಸರು ಬುಧವಾರ ಸಂಜೆ ಅಶ್ರುವಾಯು ಪ್ರಯೋಗಿಸಿದ್ದಾರೆ. 

ಗಡಿ ಭಾಗದಲ್ಲಿ ಡ್ರೋನ್‌ ಬಳಸಿ ರೈತರ ಚಲನವಲನಗಳ ಮೇಲೆ ಪೊಲೀಸರು ನಿಗಾ ವಹಿಸಿದರು. ಅಶ್ರುವಾಯು ಸಿಡಿಯುತ್ತಿದ್ದಂತೆ ಆವರಿಸಿದ ದಟ್ಟ ಹೊಗೆಯಿಂದ ಪಾರಾಗಲು ರೈತರು ಮುಖಗವಸು ಹಾಗೂ ಕನ್ನಡಕಗಳನ್ನು ತೊಟ್ಟು ಸುರಕ್ಷಿತ ಸ್ಥಳಗಳತ್ತ ದೌಡಾಯಿಸಿದರು.

ಕನಿಷ್ಠ ಬೆಂಬಲ ಬೆಲೆ (MSP)ಯ ಕಾನೂನು ಖಾತ್ರಿಯ ಗ್ಯಾರಂಟಿಯ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗಿನ 4ನೇ ಸುತ್ತಿನ ಮಾತುಕತೆ ನಡೆದ ಎರಡು ದಿನಗಳ ಬಳಿಕ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. 

ಫೆ. 13ರಿಂದ ‘ದೆಹಲಿ ಚಲೋ’ ಯಾತ್ರೆ ಆರಂಭಗೊಂಡಿತ್ತು. ಟ್ರ್ಯಾಕ್ಟರ್, ಟ್ರಾಲಿ, ಮಿನಿ ವ್ಯಾನ್‌, ಪಿಕಪ್ ವಾಹನ ಸಹಿತ ರೈತರು ದೆಹಲಿಯ ಗಡಿಯತ್ತ ಸಾಗಿ ಬರುತ್ತಿದ್ದಾರೆ. ಈ ವಾಹನಗಳೊಂದಿಗೆ ಜೆಸಿಬಿಯಂತ ಅರ್ಥ್‌ಮೂವರ್‌ಗಳನ್ನು ಒಳಗೊಂಡ ಬೃಹತ್ ವಾಹನಗಳನ್ನೂ ರೈತರು ಗಡಿಯತ್ತ ತರುತ್ತಿದ್ದಾರೆ. ಇವುಗಳನ್ನು ತಡೆಬೇಲಿಯನ್ನು ಭೇದಿಸಲು ಬಳಸುವ ಅಪಾಯವಿದೆ ಎಂದು ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.

ಕೃಷಿ ಸಚಿವ ಅರ್ಜುನ್ ಮುಂಡಾ ಸೇರಿದಂತೆ ಕೇಂದ್ರದ ಮೂವರು ಸಚಿವರು ರೈತರೊಂದಿಗೆ ನಿರಂತರ ಮಾತುಕತೆ ನಡೆಸಿದ್ದಾರೆ. ಜತೆಗೆ ಶಾಂತಿ ಕಾಪಾಡುವಂತೆ ಮತ್ತು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಎಂಎಸ್‌ಪಿ ಸಹಿತ ರೈತರ ಉಳಿದ ವಿಷಯಗಳ ಕುರಿತು ಚರ್ಚೆ ನಡೆಸಲು 5ನೇ ಸುತ್ತಿನ ಮಾತುಕತೆಗೆ ರೈತರನ್ನು ಆಹ್ವಾನಿಸಲಾಗಿದೆ.

ಗಡಿಯಲ್ಲಿ ಬೀಡು ಬಿಟ್ಟಿರುವ ರೈತರನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಜಗಜೀತ್ ಸಿಂಗ್ ದಲ್ಲೇವಾಲ, ‘ಈ ಹೋರಾಟವನ್ನು ನಾವು ಗೆಲ್ಲಬೇಕಿದೆ. ಹೀಗಾಗಿ ಶಾಂತಿ ಹಾಗೂ ತಾಳ್ಮೆಯನ್ನು ರೈತರು ಪ್ರದರ್ಶಿಸಬೇಕು. ಈ ಹೋರಾಟವನ್ನು ವಿಫಲಗೊಳಿಸುವ ಕೆಲ ವಿದ್ರೋಹಿಗಳು ಕೆಲಸ ಮಾಡುವ ಸಾಧ್ಯತೆ ಇದ್ದು, ಅವರ ಕುರಿತು ಎಚ್ಚರಿಕೆಯಿಂದ ಇರಬೇಕು’ ಎಂದರು.

ಬುಧವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ದಲ್ಲೇವಾಲ, ‘ನಮ್ಮ ಉದ್ದೇಶ ಶಾಂತಿ ಕದಡುವುದಲ್ಲ. ಆದರೆ ಕೇಂದ್ರದ ಅನಗತ್ಯ ವಿಳಂಬ ನೀತಿ ಧೋರಣೆಯಿಂದ ರೈತರು ಅಸಮಾಧಾನಗೊಂಡಿದ್ದಾರೆ’ ಎಂದಿದ್ದಾರೆ.

ರೈತರಿಗೆ ಎಚ್ಚರಿಕೆ ನೀಡಲು ಮೈಕ್ರೊ ಬ್ಲಾಗಿಂಗ್ ಎಕ್ಸ್‌ ಮೊರೆ ಹೋಗಿರುವ ಹರಿಯಾಣ ಪೊಲೀಸರು, ‘ಧರಣಿ ಸ್ಥಳದಿಂದ ಯಂತ್ರಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಜೆಸಿಬಿ ಮಾಲೀಕರಿಗೆ ಸೂಚನೆ ನೀಡಿರುವ ಪೊಲೀಸರು, ‘ಬಾಡಿಗೆ ನೀಡಿದ ಯಂತ್ರಗಳನ್ನು ಕೂಡಲೇ ಹಿಂಪಡೆಯಬೇಕು. ಈ ಯಂತ್ರಗಳನ್ನು ಮುಷ್ಕರದಲ್ಲಿ ಬಳಸಿ, ತಡೆ ಬೇಲಿಯನ್ನು ಕಿತ್ತೊಗೆಯಲು ಬಳಸುವ ಅಪಾಯವಿದೆ. ಇದರಿಂದ ಭದ್ರತಾ ಸಿಬ್ಬಂದಿಗೆ ತೊಂದರೆಯಾಗಲಿದೆ. ಇದು ಜಾಮೀನು ರಹಿತ ಅಪರಾಧವಾಗಿದ್ದು, ಇದಕ್ಕೆ ನೀವೇ ಹೊಣೆಗಾರರಾಗುತ್ತೀರಿ’ ಎಂದಿದ್ದಾರೆ.

ರೈತರು ನಡೆಸುತ್ತಿರುವ ದೆಹಲಿ ಚಲೋ ಯಾತ್ರೆಗೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗು ಕಿಸಾನ್ ಮಜ್ದೂರ್‌ ಮೋರ್ಚಾ ಕರೆ ನೀಡಿದ್ದು, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುತ್ತಿದೆ. 

ಐದು ವರ್ಷಗಳವರೆಗೆ ಬೇಳೆಕಾಳು, ಮೆಕ್ಕೆಜೋಳ ಹಾಗು ಹತ್ತಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರದ ಭರವಸೆಯನ್ನು ರೈತರು ತಿರಸ್ಕರಿಸಿದ್ದರು. ಇದೇ ವಿಷಯವಾಗಿ ಫೆ. 8, 12, 15 ಹಾಗೂ 18ರಂದು ಸಭೆಗಳು ನಡೆದಿದ್ದವು. ಅವುಗಳು ಮುರಿದುಬಿದ್ದಿವೆ. ಸರ್ಕಾರದ ಪರವಾಗಿ ಸಚಿವರಾದ ಪಿಯೂಷ್ ಗೋಯಲ್, ಅರ್ಜುನ್ ಮುಂಡಾ ಹಾಗೂ ನಿತ್ಯಾನಂದ ರಾಜ್ ಸಂಧಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ರೈತರ ಬೇಡಿಕೆಗಳಿವು..

  • ಸ್ವಾಮಿನಾಥನ್ ಆಯೋಗದ ಶಿಫಾರಸುಗಳು ಜಾರಿ

  • ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ಯೋಜನೆ

  • ವಿದ್ಯುತ್ ದರ ಏರಿಕೆ ಮಾಡಬಾರದು

  • 2021ರ ಲಖೀಂಪುರ ಖೇರಿ ಗಲಭೆಯಲ್ಲಿ ಸಂತ್ರಸ್ತರ ಪರವಾಗಿ ಧರಣಿ ನಡೆಸಿದ ರೈತರ ವಿರುದ್ಧ ಪ್ರಕರಣ ವಾಪಾಸ್,

  • ಭೂಸ್ವಾಧೀನ ಕಾಯ್ದೆ 2013ರ ಮರುಸ್ಥಾಪನೆ

  • 2020–21ನೇ ಸಾಲಿನಲ್ಲಿ ನಡೆದ ರೈತರ ಧರಣಿ ಸಂದರ್ಭದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT