ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಸಬ್ಸಿಡಿಗೆ ₹22,303 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

Published 25 ಅಕ್ಟೋಬರ್ 2023, 14:45 IST
Last Updated 25 ಅಕ್ಟೋಬರ್ 2023, 14:45 IST
ಅಕ್ಷರ ಗಾತ್ರ

ನವದೆಹಲಿ: 2023-24ನೇ ಸಾಲಿನ ಹಿಂಗಾರು ಹಂಗಾಮು ಅವಧಿಗೆ (ಅಕ್ಟೋಬರ್‌ 1ರಿಂದ ಮಾರ್ಚ್‌ 31) ಫಾಸ್ಫೇಟ್‌ ಹಾಗೂ ಪೊಟ್ಯಾಸಿಯಮ್ ಅಂಶವಿರುವ ರಸಗೊಬ್ಬರಗಳಿಗೆ ಪೋಷಕಾಂಶ ಆಧಾರಿತ ಸಬ್ಸಿಡಿಗಾಗಿ ₹22,303 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಪ್ರತಿ ಕೆ.ಜಿ. ಸಾರಜನಕಕ್ಕೆ ₹47.02, ರಂಜಕಕ್ಕೆ ₹20.82 ಮತ್ತು ಪೊಟ್ಯಾಸಿಯಮ್‌ಗೆ ₹2.38 ದರದಲ್ಲಿ ಸರ್ಕಾರ ಸಹಾಯಧನ ನೀಡಲಿದೆ. ಇದು ಮುಂಗಾರು ಹಾಗೂ ಕಳೆದ ವರ್ಷದ ಹಿಂಗಾರು ಹಂಗಾಮಿನಲ್ಲಿ ನೀಡಿರುವ ದರಕ್ಕಿಂತ ತೀವ್ರ ಕಡಿಮೆಯಾಗಿದೆ.  ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಇಳಿಕೆಯಾಗಿರುವುದರಿಂದ ಸಬ್ಸಿಡಿ ದರ ಕಡಿಮೆಯಾಗಿದೆ’ ಎಂದು ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದರು. 

2023-24ರ ಮುಂಗಾರು ಹಂಗಾಮು ಅವಧಿಯಲ್ಲಿ ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿಗಾಗಿ ₹38,000 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟವು ಮೇ ತಿಂಗಳಲ್ಲಿ ಅನುಮೋದನೆ ನೀಡಿತ್ತು. ಖಾರಿಫ್‌ನಲ್ಲಿ ಸಾರಜನಕಕ್ಕೆ ಕೆ.ಜಿ.ಗೆ ₹76 ಹಾಗೂ ರಂಜಕಕ್ಕೆ ₹41 ಸಬ್ಸಿಡಿ ನೀಡಲಾಗಿತ್ತು. 

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಹಿಂಗಾರು ಋತುವಿನಲ್ಲಿ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ ದರಗಳನ್ನು ನಿಗದಿಪಡಿಸಲು ರಸಗೊಬ್ಬರ ಇಲಾಖೆಯ ಪ್ರಸ್ತಾವನೆಯನ್ನು ಅನುಮೋದಿಸಿತು. ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅನುರಾಗ್‌ ಠಾಕೂರ್‌, ‘ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಸರ್ಕಾರ ಬದ್ಧವಾಗಿದೆ. ದೇಶದ 12 ಕೋಟಿಗೂ ಹೆಚ್ಚು ರೈತರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ’ ಎಂದು ಹೇಳಿದರು. ರೈತರಿಗೆ ಡಿಎಪಿಯನ್ನು ಹಳೆಯ ದರದಲ್ಲೇ (50 ಕೆ.ಜಿ.ಗೆ ₹1,350) ಒದಗಿಸಲಾಗುವುದು ಎಂದು ಅವರು ಹೇಳಿದರು. 

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮದಡಿ ಉತ್ತರಾಖಂಡ್‌ನ ಜಮ್ರಾಣಿ ಅಣೆಕಟ್ಟೆ ವಿವಿಧೋದ್ದೇಶ ಯೋಜನೆಯ ಸೇರ್ಪಡೆಗೆ ಸಂಪುಟ ಅನುಮೋದನೆ ನೀಡಿದೆ. ಅಂದಾಜು ₹2,584 ಕೋಟಿ ವೆಚ್ಚದ ಯೋಜನೆಯನ್ನು 2028ರ ಮಾರ್ಚ್ ಒಳಗೆ ಪೂರ್ಣಗೊಳಿಸಲು ಉತ್ತರಾಖಂಡಕ್ಕೆ ₹1,557 ಕೋಟಿ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ. 

ನೈನಿತಾಲ್ ಜಿಲ್ಲೆಯಲ್ಲಿ ರಾಮ್ ಗಂಗಾ ನದಿಯ ಉಪನದಿಯಾದ ಗೋಲಾ ನದಿಗೆ ಅಡ್ಡಲಾಗಿ ಜಮ್ರಾಣಿ ಗ್ರಾಮದ ಬಳಿ ಅಣೆಕಟ್ಟನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT