ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿದೆ ಅಯೋಧ್ಯೆಯ ರಾಮಲಲ್ಲಾ ಮೂರ್ತಿ; ಜ. 22ರಂದು ಪ್ರಾಣ ಪ್ರತಿಷ್ಠಾಪನೆಗೆ ಸಜ್ಜು

Published 19 ಜನವರಿ 2024, 9:54 IST
Last Updated 19 ಜನವರಿ 2024, 10:11 IST
ಅಕ್ಷರ ಗಾತ್ರ

ಅಯೋಧ್ಯೆ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಮೂರು ದಿನಗಳು ಬಾಕಿ ಇರುವಾಗಲೇ ರಾಮಲಲ್ಲಾನ ಮೂರ್ತಿಯ ಮೊದಲ ಚಿತ್ರ ಶುಕ್ರವಾರ ಬಹಿರಂಗಗೊಂಡಿದೆ.

ಕನ್ನಡಿಗ ಅರುಣ್ ಯೋಗಿರಾಜ್‌ ಅವರು ಕೆತ್ತಿರುವ ಈ ಕೃಷ್ಣ ಶಿಲೆಯ ಮೂರ್ತಿಯ ಕಣ್ಣುಗಳನ್ನು ಹಳದಿ ಬಟ್ಟೆಯಿಂದ ಮುಚ್ಚಲಾಗಿದೆ. ಗುಲಾಬಿಯ ಸುಂದರ ಹಾರವನ್ನು ಮೂರ್ತಿಗೆ ಹಾಕಲಾಗಿದೆ. ಈ ಚಿತ್ರವನ್ನು ವಿಶ್ವ ಹಿಂದೂ ಪರಿಷತ್ ಶುಕ್ರವಾರ ಹಂಚಿಕೊಂಡಿದೆ.

‘51 ಇಂಚು ಎತ್ತರದ ರಾಮಲಲ್ಲಾನ ಮೂರ್ತಿಯನ್ನು ಗುರುವಾರ ಮಧ್ಯಾಹ್ನ ಗರ್ಭಗುಡಿಯೊಳಗೆ ತರಲಾಯಿತು. ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆಗಳನ್ನು ನಡೆಸಲಾಯಿತು. ವೇದಘೋಷಗಳ ಪಠಣ ಹಾಗೂ ಪೂಜಾ ಕೈಂಕರ್ಯಗಳು ಭರದಿಂದ ಸಾಗಿವೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಅವರು ಪ್ರಧಾನ ಸಂಕಲ್ಪವನ್ನು ಮಾಡಲಿದ್ದಾರೆ’ ಎಂದು ಟ್ರಸ್ಟ್‌ನ ಸದಸ್ಯ ದೀಕ್ಷಿತ್ ತಿಳಿಸಿದ್ದಾರೆ.

‘ಪ್ರಧಾನ ಸಂಕಲ್ಪ ಎಂಬ ಪರಿಕಲ್ಪನೆಯು ಭಗವಾನ್ ರಾಮನ ಮೂರ್ತಿ ಪ್ರತಿಷ್ಠಾಪನೆಯು ಸರ್ವರ ಕಲ್ಯಾಣ, ದೇಶದ ಏಳಿಗೆ, ಮನುಕುಲದ ಉದ್ಧಾರ ಹಾಗೂ ಮಂದಿರ ಆಗುವಲ್ಲಿ ಶ್ರಮವಹಿಸಿದ ಪ್ರತಿಯೊಬ್ಬರ ಪರವಾಗಿರಲಿದೆ. ಇದನ್ನು ಹೊರತುಪಡಿಸಿ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಬ್ರಾಹ್ಮಣರಿಗೆ ವಸ್ತ್ರದಾನ ನಡೆಯಲಿದೆ. ಇನ್ನಿತರ ಕೆಲಸಗಳ ಹಂಚಿಕೆ ಆಗಿದೆ’ ಎಂದು ತಿಳಿಸಿದ್ದಾರೆ.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜ. 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳವಾರದಿಂದ ಸಾರ್ವಜನಿಕರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದಿದ್ದಾರೆ.

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗಾಗಿ ಗರ್ಭಗುಡಿಯೊಳಗೆ ತಂದ ರಾಮಲಲ್ಲಾ ಮೂರ್ತಿ

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗಾಗಿ ಗರ್ಭಗುಡಿಯೊಳಗೆ ತಂದ ರಾಮಲಲ್ಲಾ ಮೂರ್ತಿ

ಪಿಟಿಐ ಚಿತ್ರ

ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಅವರು ಮಾಹಿತಿ ನೀಡಿ, ‘ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾದಿದೆ. ಈಗಾಗಲೇ ಮೂರ್ತಿಯನ್ನು ಗರ್ಭಗುಡಿಯೊಳಗೆ ತರಲಾಗಿದೆ. ಕಾರ್ಯಕ್ರಮ ಸ್ಥಳದಲ್ಲಿ ಮೂಲಸೌಕರ್ಯ, ವೈದ್ಯಕೀಯ ವ್ಯವಸ್ಥೆ, ಔಷಧಗಳ ದಾಸ್ತಾನು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಸಂಜಯ್ ಜೈನ್ ಪ್ರತಿಕ್ರಿಯಿಸಿ, ‘ಅಯೋಧ್ಯೆಯ ರಾಮಮಂದಿರ ಸುತ್ತಮುತ್ತಲಿನ 16 ಸ್ಥಳಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವ ತಂಡ ಇರಲಿದೆ. ಇದರಲ್ಲಿ ವೈದ್ಯರು, ಔಷಧ ತಜ್ಞರು ಮತ್ತು ಸಹಾಯಕರು ಇರಲಿದ್ದಾರೆ. ಪ್ರತಿ ಘಟಕವೂ ಆಮ್ಲಜನಕ ಸಹಿತ 10ರಿಂದ 20 ಹಾಸಿಗೆಗಳ ಸೌಕರ್ಯವನ್ನು ಹೊಂದಿವೆ. 40 ಆಂಬುಲೆನ್ಸ್‌ಗಳು ಸಜ್ಜಾಗಿರಲಿವೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT