ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಗೂಗಲ್ ಮ್ಯಾಪ್‌ ಬಳಕೆದಾರರಿಗೆ ಕೇರಳ ಪೊಲೀಸ್‌ ಮಾರ್ಗಸೂಚಿ

Published 2 ಅಕ್ಟೋಬರ್ 2023, 10:46 IST
Last Updated 2 ಅಕ್ಟೋಬರ್ 2023, 10:46 IST
ಅಕ್ಷರ ಗಾತ್ರ

ಕೊಚ್ಚಿ: ಮುಂಗಾರಿನ ಅವಧಿಯಲ್ಲಿ ಗೂಗಲ್ ಮ್ಯಾಪ್‌ ಬಳಕೆದಾರರಿಗೆ ಕೇರಳ ಪೊಲೀಸರು ಮುನ್ನಚ್ಚರಿಕಾ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದಾರೆ.

ಗೂಗಲ್ ಮ್ಯಾಪ್‌ ತೋರಿಸಿದ ದಾರಿ ಅನುರಿಸರಿಕೊಂಡು ಇಬ್ಬರು ವೈದ್ಯರು ನದಿಗೆ ಬಿದ್ದು ಸಾವಿಗೀಡಾದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇರಳ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ ಪೋಸ್ಟ್‌ ಮಾಡಿರುವ ಪೊಲೀಸರು, ಮಾನ್ಸೂನ್‌ ಅವಧಿಯಲ್ಲಿ ಅಪರಿಚಿತ ದಾರಿಯಲ್ಲಿ ಪ್ರಯಾಣಿಸಬೇಡಿ ಎಂದು ಹೇಳಿದ್ದಾರೆ. ಅಲ್ಲದೆ ಗೂಗಲ್ ಮ್ಯಾಪ್‌ನಲ್ಲಿ ಏನು ಮಾಡಬೇಕು ಏನು ಮಾಡಬಾರದು ಎನ್ನುವುದನ್ನು ಪಟ್ಟಿ ಮಾಡಿದ್ದಾರೆ.

ಮಳೆಯ ಸಮಯದಲ್ಲಿ ಆಗಾಗ್ಗೆ ರಸ್ತೆಗಳನ್ನು ಬದಲಿಸಲಾಗುತ್ತದೆ. ಆದರೆ ಗೂಗಲ್‌ ಮ್ಯಾಪ್‌ನಲ್ಲಿ ಪರ್ಯಾಯ ರಸ್ತೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಗೂಗಲ್‌ ಮ್ಯಾಪ್‌ ನೋಡಿ ಅಪರಿಚಿತ ದಾರಿಯಲ್ಲಿ ಸಾಗುವುದು ಅಪಾಯಕಾರಿ ಎಂದು ಹೇಳಿದ್ದಾರೆ.

‘ಕಡಿಮೆ ಟ್ರಾಫಿಕ್‌ ಇರುವ ರಸ್ತೆಯನ್ನು ಗೂಗಲ್ ಮ್ಯಾಪ್ ತೋರಿಸಬಹುದು. ಅದರೆ ಅವುಗಳು ಸುರಕ್ಷಿತವಲ್ಲ. ತೊರೆಗಳು ಉಬ್ಬಿ ಹರಿಯುವ, ಭೂಕುಸಿತ ಉಂಟಾಗಿರುವ, ಮರಗಳು ಬಿದ್ದಿರುವ, ಕಡಿದಾದ ಹಾಗೂ ಅಪಾಯಕಾರಿ ರಸ್ತೆಗಳನ್ನು ಬಳಸಲು ಗೂಗಲ್ ಮ್ಯಾಪ್‌ ತೋರಿಸಬಹುದು’ ಎಂದು ಎಚ್ಚರಿಸಿದ್ದಾರೆ.

ಅಲ್ಲದೆ ದಾರಿ ಮಧ್ಯೆ ಜಿಪಿಎಸ್‌ ಕೈಕೊಡುವ ಸಾಧ್ಯತೆ ಇರುವುದರಿಂದ ಮೊದಲೇ ರೂಟ್‌ ಮ್ಯಾಪ್ ಸೇವ್‌ ಮಾಡಿಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

‘ಯಾವ ವಾಹನದಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಗೂಗಲ್‌ ಮ್ಯಾಪ್‌ನಲ್ಲಿ ಆಯ್ಕೆಯಾಡಿ. ನಾಲ್ಕು ಚಕ್ರದ ವಾಹನ, ದ್ವಿಚಕ್ರ, ನಡಿಗೆ ಹಾಗೂ ರೈಲಿನ ಆಯ್ಕೆ ಇದೆ. ಇವುಗಳಲ್ಲಿ ಸರಿಯಾಗಿದ್ದನ್ನೇ ಆಯ್ಕೆ ಮಾಡಿ’ ಎಂದು ಬರೆದುಕೊಂಡಿದೆ.

ಅಲ್ಲದೆ ರಸ್ತೆ ತಡೆ, ಟ್ರಾಫಿಕ್‌ ಜಾಮ್ ಬಗ್ಗೆ ಇತರರಿಗೆ ಮಾಹಿತಿ ನೀಡಲು ಗೂಗಲ್ ಮ್ಯಾಪ್‌ನಲ್ಲಿರುವ ‘Contribute’ ಆಯ್ಕೆಯನ್ನು ಬಳಸಿ ಎಂದು ಮನವಿ ಮಾಡಿಕೊಂಡಿದೆ.

ಭಾನುವಾರ ಕೊಚ್ಚಿಯ ಪರವೂರಿನ ಗೋತುರುತ್ತ್ ಬಳಿ ಭಾನುವಾರ ಕಾರು ನದಿಗೆ ಉರುಳಿ ಇಬ್ಬರು ಯುವ ವೈದ್ಯರು ಮೃತಪಟ್ಟಿದ್ದರು. ಎಂಬಿಬಿಎಸ್‌ ವಿದ್ಯಾರ್ಥಿ ಸೇರಿದಂತೆ ಕಾರಿನಲ್ಲಿದ್ದ ಇತರ ಮೂವರನ್ನು ರಕ್ಷಣೆ ಮಾಡಲಾಗಿತ್ತು.

ಗೂಗಲ್‌ ಮ್ಯಾಪ್‌ ತೋರಿಸಿದ ದಾರಿಯಲ್ಲಿ ತಿರುವು ತೆಗೆದುಕೊಂಡ ಕಾರಣ ಕಾರು ನದಿಗೆ ಉರುಳಿದೆ ಎಂದು ಕಾರಿನಲ್ಲಿದ್ದವರು ತಿಳಿಸಿದ್ದರು.

ಡಾ.ಅದ್ವೈತ್ (28) ಮತ್ತು ಡಾ.ಅಜ್ಮಲ್‌ (27) ಮೃತಪಟ್ಟವರು. ಇವರಿಬ್ಬರು ತ್ರಿಶ್ಯೂರ್‌ ಜಿಲ್ಲೆಯ ಕೊಡುಂಗಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ರಸ್ತೆಯ ತಿರುವಿಗಿಂತಲೂ ಮೊದಲು ಚಾಲಕ ತಿರುವು ತೆಗೆದುಕೊಂಡ ಕಾರಣ ಕಾರು ನದಿಗೆ ಉರುಳಿದೆ. ರಸ್ತೆ ಬದಿಯಲ್ಲಿ ಯಾವುದೇ ತಡೆಗೋಡೆ ಇರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT