ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರ್ವಜನಿಕ ಭಾಷಣದ ಘನತೆ ಕುಸಿಯುವಂತೆ ಮಾಡಿದ ಮೋದಿ: ಮನಮೋಹನ್‌ ಸಿಂಗ್‌

Published 30 ಮೇ 2024, 15:31 IST
Last Updated 30 ಮೇ 2024, 15:31 IST
ಅಕ್ಷರ ಗಾತ್ರ

ನವದೆಹಲಿ: ‘ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದ್ವೇಷಪೂರಿತ ಹೇಳಿಕೆಗಳನ್ನು ನೀಡುವ ಮಾಡುವ ಮೂಲಕ ಸಾರ್ವಜನಿಕ ಭಾಷಣದ ಘನತೆ ಮತ್ತು ಪ್ರಧಾನಿ ಹುದ್ದೆಯ ಗೌರವ ಕುಸಿಯುವಂತೆ ಮಾಡಿದ್ದಾರೆ’ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ಜೂನ್‌ 1ರಂದು ನಡೆಯಲಿರುವ ಏಳನೇ ಹಂತದ ಮತದಾನಕ್ಕೂ ಮುನ್ನ ಅವರು ಪಂಜಾಬ್‌ ಮತದಾರರಿಗೆ ಬರೆದಿರುವ ಪತ್ರದಲ್ಲಿ ‘ಕಾಂಗ್ರೆಸ್‌ ಪಕ್ಷವು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಸಂರಕ್ಷಿಸುವ ಮೂಲಕ ಬೆಳವಣಿಗೆ ಆಧಾರಿತ ಪ್ರಗತಿಪರ ಭವಿಷ್ಯವನ್ನು ಖಚಿತಪಡಿಸುತ್ತದೆ’ ಎಂದು ಪ್ರತಿಪಾದಿಸಿದ್ದಾರೆ.

ಸಶಸ್ತ್ರ ಪಡೆಗಳ ಮೇಲೆ ಬಿಜೆಪಿ ಸರ್ಕಾರ ಹೇರಿರುವ ‘ಅಗ್ನಿವೀರ’ ಯೋಜನೆಯನ್ನು ‘ಕಳಪೆ ಪರಿಕಲ್ಪನೆ’ ಎಂದು ಟೀಕಿಸಿದ ಸಿಂಗ್‌ ‘ದೇಶಭಕ್ತಿ ಶೌರ್ಯ ಮತ್ತು ಸೇವೆಯ ಮೌಲ್ಯ ಕೇವಲ ನಾಲ್ಕು ವರ್ಷಗಳು ಎಂದು ಬಿಜೆಪಿ ಭಾವಿಸಿದಂತಿದೆ. ಇದು ಅವರ ನಕಲಿ ರಾಷ್ಟ್ರೀಯತೆಯನ್ನು ತೋರಿಸುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

‘ಈ ಚುನಾವಣಾ ಪ್ರಚಾರದ ಸಮಯದಲ್ಲಿ ರಾಜಕೀಯ ಭಾಷಣಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮೋದಿ ಅವರಂತೂ ದ್ವೇಷ ಭಾಷಣಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದೂ ಸಂಪೂರ್ಣವಾಗಿ ವಿಭಜಿಸುವ ಸ್ವಾಭಾವದ್ದಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ದೇಶದಲ್ಲಿ ಹಿಂದೆ ಯಾವ ಪ್ರಧಾನಿಯೂ ಇಂತಹ ದ್ವೇಷಪೂರಿತ ಅಸಂಸದೀಯ ಮತ್ತು ಒರಟು ಪದಗಳನ್ನು ಬಳಸಿಲ್ಲ. ಅವರ ಮಾತುಗಳಂತೂ ಸಮಾಜದ ನಿರ್ದಿಷ್ಟ ವರ್ಗವನ್ನು ಗುರಿಯಾಗಿಸುತ್ತದೆ. ಅವರು ನನ್ನ ವಿರುದ್ಧವೂ ಕೆಲ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ನನ್ನ ಜೀವನದಲ್ಲಿ ಎಂದಿಗೂ ನಾನು ಸಮುದಾಯವನ್ನು ಪ್ರತ್ಯೇಕಿಸುವ ಕುರಿತ ಮಾತುಗಳನ್ನಾಡಿಲ್ಲ. ಅದು ಏನಿದ್ದರೂ ಬಿಜೆಪಿಯ ಏಕೈಕ ಹಕ್ಕುಸ್ವಾಮ್ಯ’ ಎಂದು ಟೀಕಿಸಿದ್ದಾರೆ.

ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಸಿಂಗ್‌ ಅವರು ಹೇಳಿದ್ದರು ಎಂದು ಮೋದಿ ಆರೋಪಿಸಿದ್ದರು. ‘ಅಮಾನವೀಯತೆಯ ಈ ನಿರೂಪಣೆಯು ಈಗ ಅದರ ಉತ್ತುಂಗವನ್ನು ತಲುಪಿದೆ. ಈ ಶಕ್ತಿಗಳಿಂದ ದೇಶವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT