ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

TTD: ವೆಂಕಟೇಶ್ವರ ಭಕ್ತಾದಿಗಳಿಗೆ ಪ್ರಸಾದ: ₹3.7 ಕೋಟಿ ದೇಣಿಗೆ ನೀಡಿದ ಉದ್ಯಮಿಗಳು

Published 29 ಆಗಸ್ಟ್ 2024, 9:43 IST
Last Updated 29 ಆಗಸ್ಟ್ 2024, 9:43 IST
ಅಕ್ಷರ ಗಾತ್ರ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ)ನ ವೆಂಕಟೇಶ್ವರ ಅನ್ನಪ್ರಸಾದಮ್‌ ಟ್ರಸ್ಟ್‌ ವತಿಯಿಂದ ನಿತ್ಯ ತಿರುಮಲಕ್ಕೆ ಬರುವ ಭಕ್ತಾದಿಗಳಿಗೆ ವಿತರಿಸಲಾಗುವ ಅನ್ನ ಪ್ರಸಾದಕ್ಕೆ ಹೈದರಾಬಾದ್ ಮೂಲದ ನಾಲ್ವರು ಉದ್ಯಮಿಗಳು ₹3.7 ಕೋಟಿ ದೇಣಿಗೆ ನೀಡಿದ್ದಾರೆ.

ಪಿ. ವೆಂಕಟೇಶ್ವರಲು, ರಾಜಮೌಳಿ, ಪ್ರಸಾದ್ ರಾವ್ ಹಾಗೂ ಎಂ. ಲಕ್ಷ್ಮಿ ಕುಮಾರಿ ಅವರು ಒಟ್ಟು ₹3.7 ಕೋಟಿ ಮೊತ್ತದ ಚೆಕ್‌ ಅನ್ನು ತಿರಮಲದಲ್ಲಿ ದೇಗುಲದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ನೀಡಿದ್ದಾರೆ ಎಂದು ದೇಗುಲುದ ಪ್ರಕಟಣೆ ಗುರುವಾರ ತಿಳಿಸಿದೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮಾರಾವ್ ಅವರು 1985ರಲ್ಲಿ ವೆಂಕಟೇಶ್ವರ ನಿತ್ಯ ಅನ್ನದಾನಂ ದತ್ತಿ ಯೋಜನೆಯನ್ನು ಆರಂಭಿಸಿದರು. ಈ ಯೋಜನೆ ಮೂಲಕ ನಿತ್ಯ ಎರಡು ಸಾವಿರ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತಿತ್ತು. ನಂತರ, 1994ರಲ್ಲಿ ಇದನ್ನು ಸ್ವತಂತ್ರ್ಯ ಟ್ರಸ್ಟ್‌ಗೆ ವರ್ಗಾಯಿಸಲಾಯಿತು. ಮುಂದೆ 2014ರಲ್ಲಿ ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್‌ ಆಗಿ ಬದಲಾಯಿತು.

ಈ ಟ್ರಸ್ಟ್‌ಗೆ ಜಗತ್ತಿನ ವಿವಿಧ ಪ್ರದೇಶಗಳಿಂದ ದೇಣಿಗೆ ಹರಿದುಬರುತ್ತಿದೆ. ಇವುಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿಟ್ಟು, ಅದರಿಂದ ಬರುವ ಬಡ್ಡಿಯನ್ನು ಬಳಸಿಕೊಳ್ಳುವ ಟ್ರಸ್ಟ್‌, ಬರುವ ಭಕ್ತರಿಗೆ ನಿತ್ಯ ಅನ್ನಪ್ರಸಾದ ವಿತರಿಸುತ್ತಿದೆ. ನಿತ್ಯ ಮೂರು ಹೊತ್ತು ಇಲ್ಲಿ ಊಟ ನೀಡಲಾಗುತ್ತಿದೆ. 

ಟಿಟಿಡಿ ನಿರ್ವಹಿಸುತ್ತಿರುವ ಈ ಬೃಹತ್ ಅಡುಗೆ ಕೋಣೆಯಲ್ಲಿ ನಿತ್ಯ 14 ಟನ್‌ ಅನ್ನ ಸಿದ್ಧವಾಗುತ್ತದೆ. 10 ಸಾವಿರ ಲೀಟರ್‌ ಹಾಲು ವಿತರಿಸಲಾಗುತ್ತಿದೆ. ಸಾರು ಹಾಗೂ ಪಲ್ಯಕ್ಕೆ ನಿತ್ಯ 7.5 ಟನ್ ತರಕಾರಿ ಬೇಯಿಸಲಾಗುತ್ತದೆ. ಇವೆಲ್ಲವೂ ದೇಣಿಗೆಯಿಂದ ಬಂದ ಹಣದಿಂದಲೇ ಭಕ್ತರಿಗೆ ವಿತರಿಸಲಾಗುತ್ತಿದೆ. 

ಹಿಂದೂ ಕ್ಯಾಲೆಂಡರ್‌ನ ಹೊಸ ವರ್ಷದ ದಿನ, ವೈಕುಂಠ ಏಕಾದಶಿ, ರಥಸಪ್ತಮಿ ಹಾಗೂ ಗರಡು ಸೇವೆಯ ದಿನ ಈ ಟ್ರಸ್ಟ್ ಮೂಲಕ ಸುಮಾರು ಎರಡು ಲಕ್ಷ ಭಕ್ತಾಧಿಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಟ್ರಸ್ಟ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT