ನವದೆಹಲಿ: ಮೈಕ್ರೊಪ್ಲಾಸ್ಟಿಕ್‌ನಿಂದ ಆಹಾರ ಉತ್ಪನ್ನಗಳು ಕಲಬೆರಕೆಯಾಗುತ್ತಿರುವುದರ ಮೌಲ್ಯಮಾಪನ ಹಾಗೂ ಕಲಬೆರಕೆ ಪ್ರಮಾಣ ಪತ್ತೆ ಹಚ್ಚುವ ವಿಧಾನಗಳನ್ನು ಅಭಿವೃದ್ಧಿಪಡಿಸುವ ಪ್ರಾಜೆಕ್ಟ್‌ಗೆ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಚಾಲನೆ ನೀಡಿದೆ.
ಆಹಾರ ಉತ್ಪನ್ನಗಳಲ್ಲಿ ಮೈಕ್ರೊಪ್ಲಾಸ್ಟಿಕ್‌ಗಳನ್ನು ಬೆರೆಸಲಾಗುತ್ತಿರುವುದು ಹೊಸ ಅಪಾಯವನ್ನು ಒಡ್ಡಿದೆ ಹಾಗೂ ಈ ವಿದ್ಯಮಾನದ ಬಗ್ಗೆ ತುರ್ತು ಗಮನ ಹರಿಸುವುದು ಅಗತ್ಯ ಎಂಬ ಆತಂಕ ವ್ಯಕ್ತವಾದ ಕಾರಣ ಮಾರ್ಚ್‌ನಲ್ಲಿ ಎಫ್ಎಸ್‌ಎಸ್‌ಎಐ ಈ ಪ್ರಾಜೆಕ್ಟ್‌ಗೆ ಚಾಲನೆ ನೀಡಿದೆ.
ಉದ್ದೇಶಗಳು
* ವಿವಿಧ ಆಹಾರ ಉತ್ಪನ್ನಗಳಲ್ಲಿ ಮೈಕ್ರೊ ಮತ್ತು ನ್ಯಾನೊ ಪ್ಲಾಸ್ಟಿಕ್‌ಗಳನ್ನು ಪತ್ತೆ ಹಚ್ಚುವ ವಿಧಾನಗಳ ಅಭಿವೃದ್ಧಿ ಹಾಗೂ ದೃಢೀಕರಣ
* ಮೈಕ್ರೊ ಮತ್ತು ನ್ಯಾನೊ ಪ್ಲಾಸ್ಟಿಕ್‌ಗಳ ಪ್ರಮಾಣ ಪತ್ತೆ
* ಇವುಗಳ ವಿಶ್ಲೇಷಣೆಗೆ ಸಂಬಂಧಿಸಿ ವಿವಿಧ ಪ್ರಯೋಗಾಲಯಗಳ ವರದಿಗಳ ಹೋಲಿಕೆ ಹಾಗೂ ನಿರ್ಣಾಯಕ ದತ್ತಾಂಶ ಸಿದ್ಧಪಡಿಸುವ ಕುರಿತ ಶಿಷ್ಟಾಚಾರಗಳನ್ನು ಅಭಿವೃದ್ಧಿಪಡಿಸುವುದು
ಕಾರಣಗಳು
* ದೇಶದಲ್ಲಿ ಸಕ್ಕರೆ ಮತ್ತು ಉಪ್ಪು ಸೇರಿದಂತೆ ಸಾಮಾನ್ಯ ಆಹಾರ ಉತ್ಪನ್ನಗಳಲ್ಲಿ ಮೈಕ್ರೊ ಪ್ಲಾಸ್ಟಿಕ್‌ಗಳಿರುವ ಕುರಿತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ಇತ್ತೀಚೆಗೆ ತನ್ನ ವರದಿಯಲ್ಲಿ ಹೇಳಿತ್ತು
* ಭಾರತದಲ್ಲಿ ಬಳಕೆಯಲ್ಲಿರುವ ಆಹಾರ ಉತ್ಪನ್ನಗಳಲ್ಲಿ ಕಂಡುಬರುವ ಮೈಕ್ರೊಪ್ಲಾಸ್ಟಿಕ್‌ಗಳಿಂದಾಗಿ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಅರಿಯಬೇಕು ಎಂದು ಎಫ್ಎಒ ವರದಿಯಲ್ಲಿ ಹೇಳಿರುವುದು
ಅಧ್ಯಯನ
* ಆಹಾರ ಉತ್ಪನ್ನಗಳ ಇಂತಹ ಕಲಬೆರಕೆ ಕುರಿತು ಅಧ್ಯಯನಕ್ಕಾಗಿ ಎಫ್‌ಎಸ್‌ಎಸ್‌ಎಐ, ದೇಶದ ಪ್ರಮುಖ ಸಂಶೋಧನಾ ಸಂಸ್ಥೆಗಳೊಂದಿಗೆ ಅಧ್ಯಯನ ಕೈಗೊಂಡಿದೆ
* ಸಿಎಸ್‌ಐಆರ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಜ್ (ಲಖನೌ), ಐಸಿಎಆರ್–ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ (ಕೊಚ್ಚಿ) ಹಾಗೂ ಬಿರ್ಲಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಪಿಲನಿ) ಸಹಯೋಗ