ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪಕೃತ್ಯಕ್ಕೆ ಗಾಂಧಿ ಕುಟುಂಬ ಬೆಲೆ ತೆರಬೇಕು: ಬಿಜೆಪಿ

Published 22 ನವೆಂಬರ್ 2023, 16:25 IST
Last Updated 22 ನವೆಂಬರ್ 2023, 16:25 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಷನಲ್ ಹೆರಾಲ್ಡ್‌ಗೆ ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ‍ಪ್ರತಿಕ್ರಿಯಿಸಿರುವ ಬಿಜೆಪಿ, ‘ಗಾಂಧಿ ಕುಟುಂಬವು ತನ್ನ ಪಾಪ ಕೃತ್ಯಗಳಿಗೆ ಬೆಲೆ ತೆರಬೇಕು’ ಎಂದು ಹೇಳಿದೆ.

ಗಾಂಧಿ ಕುಟುಂಬವು ನ್ಯಾಷನಲ್ ಹೆರಾಲ್ಡ್‌ಗೆ ಸೇರಿದ ಆಸ್ತಿಯನ್ನು ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಿ, ಹಿಡಿದಿಟ್ಟುಕೊಂಡಿದೆ ಎಂದು ಬಿಜೆಪಿ ಮುಖಂಡ ರವಿ ಶಂಕರ್ ಪ್ರಸಾದ್ ಆರೋಪಿಸಿದರು. ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಯ ಮುದ್ರಣ ಸ್ಥಗಿತಗೊಂಡಿದೆ. ಆದರೆ ಪತ್ರಿಕೆಯು ಆನ್‌ಲೈನ್‌ ಮೂಲಕ ಲಭ್ಯವಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಹಲವು ನಗರಗಳ ಪ್ರಮುಖ ಕಡೆಗಳಲ್ಲಿ ಆಸ್ತಿ ಇತ್ತು. ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಈ ಆಸ್ತಿಗಳನ್ನು, ಪತ್ರಿಕೆಯ ಮಾಲೀಕತ್ವ ಹೊಂದಿರುವ ಕಂಪನಿಯ ಷೇರುಗಳನ್ನಾಗಿಸಿದರು, ಅವುಗಳನ್ನು ತಾವು ಶೇ 76ರಷ್ಟು ಷೇರುಪಾಲು ಹೊಂದಿರುವ ಕಂಪನಿಗೆ ವರ್ಗಾವಣೆ ಮಾಡಿದರು ಎಂದು ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ನೀಡಿದ ನಾಯಕತ್ವವನ್ನು ಗಾಂಧಿ ಕುಟುಂಬವು ತನ್ನದಾಗಿಸಿಕೊಂಡಿದ್ದಷ್ಟೇ ಅಲ್ಲದೆ, ಪಕ್ಷದ ಆಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿತು ಎಂದು ಪ್ರಸಾದ್ ಆರೋಪಿಸಿದರು. 

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಸೋಲುವ ಭಯ ಬಿಜೆಪಿಗೆ ಇದೆ, ಹೀಗಾಗಿ ಇ.ಡಿ. ಅಧಿಕಾರಿಗಳು ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮಾಡಿರುವ ಆರೋಪವನ್ನು ಪ್ರಸಾದ್ ಅಲ್ಲಗಳೆದರು. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಾಣಲಿದೆ. ಅಲ್ಲದೆ, ನ್ಯಾಷನಲ್ ಹೆರಾಲ್ಡ್‌ ಪ್ರಕರಣದ ತನಿಖೆಯು ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗುವ ಮೊದಲೇ ಆರಂಭವಾಗಿತ್ತು ಎಂದು ನೆನಪಿಸಿದರು.

ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ನ್ಯಾಷನಲ್ ಹೆರಾಲ್ಡ್‌ಗೆ ಸೇರಿದ ₹751.9 ಕೋಟಿ ಮೌಲ್ಯದ ಆಸ್ತಿಗಳನ್ನು ಮಂಗಳವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್‌) ಮತ್ತು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ದೇಣಿಗೆ ನೀಡಿದವರಿಗೆ ಹಾಗೂ ಷೇರುದಾರರಿಗೆ ವಂಚನೆ ಎಸಗಿದ್ದಾರೆ ಎಂದು ಇ.ಡಿ. ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT