ನವದೆಹಲಿ: ಸೋದರರ ಜತೆಗೂಡಿ ತೆರಿಗೆ ವಂಚಿಸಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದಡಿ ಭಾರತಕ್ಕೆ ಬೇಕಾಗಿದ್ದ ಮೋನಿಕಾ ಕಪೂರ್ ಎಂಬುವವರನ್ನು ಅಮೆರಿಕವು ಸಿಬಿಐಗೆ ಬುಧವಾರ ಹಸ್ತಾಂತರಿಸಿದೆ.

ಆರ್ಥಿಕ ವಂಚನೆ ಎಸಗಿದ ಆರೋಪ ಎದುರಿಸುತ್ತಿರುವ ಮೋನಿಕಾ, ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ಇವರ ವಿರುದ್ಧ ರೆಡ್ ನೋಟಿಸ್ ಅನ್ನು ಇಂಟರ್ಪೋಲ್ ಹೊರಡಿಸಿತ್ತು. ಅಮೆರಿಕ ಪೊಲೀಸರ ಸಹಾಯದಿಂದ ಸಿಬಿಐ ಮೋನಿಕಾರನ್ನು ವಶಕ್ಕೆ ಪಡೆದು, ಅಮೆರಿಕ ಏರ್ಲೈನ್ನ ಎಎ 292 ವಿಮಾನದಲ್ಲಿ ಭಾರತಕ್ಕೆ ಕರೆತರುತ್ತಿದ್ದು, ಬುಧವಾರ ರಾತ್ರಿ ಹೊತ್ತಿಗೆ ಬಂದಿಳಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರ ನೇಹಲ್ ಮೋದಿ ಬಂಧನದ ಬೆನ್ನಲ್ಲೇ ಮೋನಿಕಾ ಕಪೂರ್ ಅವರನ್ನೂ ಅಮೆರಿಕದ ಅಧಿಕಾರಿಗಳ ಸಹಕಾರದೊಂದಿಗೆ ಸಿಬಿಐ ಯಶಸ್ವಿಯಾಗಿ ಬಂಧಿಸಿದೆ.

‘ಭಾರತದಲ್ಲಿ ಅಪರಾಧ ಎಸಗಿ, ನೆಲದ ಕಾನೂನಿನಿಂದ ತಪ್ಪಿಸಿಕೊಂಡವರನ್ನು ಅಂತರರಾಷ್ಟ್ರೀಯ ಗಡಿಯನ್ನೂ ಮೀರಿ ಕರೆತರುವಲ್ಲಿ ಸಿಬಿಐ ಯಶಸ್ವಿಯಾಗಿದೆ. ಈ ಹಸ್ತಾಂತರವು ನ್ಯಾಯದ ಅನ್ವೇಷಣೆಯಲ್ಲಿ ಪ್ರಮುಖ ಪ್ರಗತಿಯಾಗಿದೆ. ಪರಾರಿಯಾಗಿದ್ದ ಆರೋಪಿಯೊಂದಿಗೆ ಸಿಬಿಐ ತಂಡ ಸ್ವದೇಶಕ್ಕೆ ಮರಳುತ್ತಿದೆ. ಮೋನಿಕಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇಲ್ಲಿಂದ ಮುಂದೆ ಅವರು ವಿಚಾರಣೆ ಎದುರಿಸಲಿದ್ದಾರೆ’ ಎಂದು ಸಿಬಿಐ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇಂಟರ್ಪೋಲ್ನ ಸಹಕಾರದೊಂದಿಗೆ ಇತರ ರಾಷ್ಟ್ರಗಳ ಕಾನೂನು ನೆರವು ಪಡೆದು ಸಿಬಿಐ ಇತ್ತೀಚಿನ ದಿನಗಳಲ್ಲಿ 100ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಏನಿದು ಮೋನಿಕಾ ಪ್ರಕರಣ..?

ಸೋದರರಾದ ರಾಜನ್ ಖನ್ನಾ ಮತ್ತು ರಾಜೀವ್ ಖನ್ನಾ ಅವರೊಂದಿಗೆ ಸೇರಿ 1998ರಲ್ಲಿ ನಕಲಿ ರಫ್ತು ದಾಖಲೆ ಸೃಷ್ಟಿಸಿ ಮೋನಿಕಾ ಕಪೂರ್ ವಂಚಿಸಿದ್ದರು. ಆರು ಮರುಪೂರಣ ಪರವಾನಗಿ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಇವರು ಆಮದು ಸುಂಕ ರಹಿತ ಆಭರಣಗಳನ್ನು ಹೊರದೇಶಗಳಿಗೆ ಕಳುಹಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

ಅಹಮದಾಬಾದ್ನಲ್ಲಿರುವ ಡೀಪ್ ಎಕ್ಸ್ಪೋರ್ಟ್ ಮೂಲಕ 1998ರಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ್ದ ಇವರು ಸರ್ಕಾರಕ್ಕೆ ಸುಮಾರು ₹1.44 ಕೋಟಿ ವಂಚಿಸಿದ್ದರು. ಮೋನಿಕಾ ಸೋದರರ ವಿರುದ್ಧ 2004ರಲ್ಲಿ ಆರೋಪಪಟ್ಟಿ ಸಿದ್ಧಗೊಂಡಿತ್ತು. 2017ರಲ್ಲಿ ರಾಜನ್ ಹಾಗೂ ರಾಜೀವ್ ಅವರನ್ನು ಜಿಲ್ಲಾ ನ್ಯಾಯಾಲಯ ಅಪರಾಧಿಗಳು ಎಂದು ಘೋಷಿಸಿತು.

ಕೃತ್ಯ ಬಯಲಿಗೆ ಬರುತ್ತಿದ್ದಂತೆ 1999ರಲ್ಲಿ ಮೋನಿಕಾ ಅಮೆರಿಕಕ್ಕೆ ಪರಾರಿಯಾದರು. 2006ರಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ದೆಹಲಿ ವಿಶೇಷ ನ್ಯಾಯಾಲಯ ಇವರ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಭಾರತಕ್ಕೆ ಕರೆತರುವ ಆದೇಶವನ್ನು 2010ರಲ್ಲಿ ನ್ಯಾಯಾಲಯ ನೀಡಿತ್ತು.

ಅಮೆರಿಕದಲ್ಲಿರುವುದನ್ನು ಖಚಿತಪಡಿಸಿಕೊಂಡ ಸಿಬಿಐ, 2012ರಲ್ಲಿ ಉಭಯ ರಾಷ್ಟ್ರಗಳ ನಡುವೆ ನಡೆದ ಒಪ್ಪಂದದನ್ವಯ ಮೋನಿಕಾರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಲ್ಲಿನ ನ್ಯಾಯಾಲಯವನ್ನು ಕೋರಿತು. ಆದರೆ ತಾನು ಅಲ್ಲಿ ಕಿರುಕುಳ ಅನುಭವಿಸುವ ಅಪಾಯ ಇರುವುದರಿಂದ ತನ್ನನ್ನು ಹಸ್ತಾಂತರಿಸದಂತೆ ಮೋನಿಕಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಈ ಮನವಿಯನ್ನು ತಿರಸ್ಕರಿಸಿದ ಅಲ್ಲಿನ ನ್ಯಾಯಾಲಯ, ಶರಣಾಗತಿ ವಾರಂಟ್ ಹೊರಡಿಸಿತು. ಆದರೆ ನಂತರದಲ್ಲೂ ಎದುರಾದ ಹಲವು ಕಾನೂನು ತೊಡಕುಗಳು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸಿದ ಸಿಬಿಐ, ತನ್ನ ಕಾನೂನು ಪ್ರಯತ್ನ ಮುಂದುವರಿಸಿತ್ತು. ಅಂತಿಮವಾಗಿ 2025ರ ಮಾರ್ಚ್ನಲ್ಲಿ ಮೋನಿಕಾರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ನ್ಯಾಯಾಲಯ ತನ್ನ ಸಮ್ಮತಿ ವ್ಯಕ್ತಪಡಿಸಿತು ಎಂದು ಸಿಬಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.