ಗೋರಖಪುರ:ಬಿಜೆಪಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗೆಲ್ಲಲೇಬೇಕು ಎಂದು ತಮ್ಮ ಪ್ರತಿಷ್ಠೆಯನ್ನು ಕಣಕ್ಕೆ ಇಳಿಸಿರುವ ಕ್ಷೇತ್ರವಿದು. 1991ರಿಂದ ಬಿಜೆಪಿ ತೆಕ್ಕೆಯಲ್ಲಿರುವ ಮತ್ತು 1998ರಿಂದ 2017ರವರೆಗೆ ಯೋಗಿ ಅವರ ತೆಕ್ಕೆಯಲ್ಲಿದ್ದ ಈ ಕ್ಷೇತ್ರದಲ್ಲಿ ಈಗ ಎಸ್‌ಪಿ–ಬಿಎಸ್‌ಪಿಯ ರಾಮ್ ಭುವಾಲ್ ನಿಶಾದ್ ಗೆಲ್ಲುವ ನೆಚ್ಚಿನ ಅಭ್ಯರ್ಥಿ ಎನಿಸಿದ್ದಾರೆ.
ಗೋರಖನಾಥ ಮಠದ ಮುಖ್ಯಸ್ಥರಾಗಿದ್ದ ಮಹಾಂತ ಆದಿತ್ಯನಾಥ ಅವರು 1991ರಲ್ಲಿ ಈ ಕ್ಷೇತ್ರವನ್ನು ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಆನಂತರ ಯೋಗಿ ಅವರು 1998ರಿಂದ ಈ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಆದ ನಂತರ ಅವರು ತಮ್ಮ ಸ್ಥಾನವನ್ನು ತೆರವು ಮಾಡಿದ್ದರು. ಆದರೆ 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯು ಎಸ್‌ಪಿ–ಬಿಎಸ್‌ಪಿ ಅಭ್ಯರ್ಥಿ ಎದುರು ಸೋಲುಂಡಿದ್ದರು.
ಅಂಥದ್ದೇ ಗೆಲುವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿ ಮಹಾಮೈತ್ರಿಕೂಟವಿದೆ. ಕ್ಷೇತ್ರದಲ್ಲಿನ ಜಾತಿ ಲೆಕ್ಕಾಚಾರವೂ ಅವರಿಗೆ ಪೂರಕವಾಗಿಯೇ ಇದೆ. 19.5 ಲಕ್ಷ ಮತದಾರರಿರುವ ಈ ಕ್ಷೇತ್ರದಲ್ಲಿ ನಿಶಾದ್ (ಮೀನುಗಾರರು) ಸಮುದಾಯದ ಮತದಾರರ ಸಂಖ್ಯೆ 3.5 ಲಕ್ಷದಷ್ಟಿದೆ. ಈ ಮತಗಳಲ್ಲಿ ಬಹುತೇಕವು ರಾಮ್ ಭುವಾಲ್ ನಿಶಾದ್ ಅವರಿಗೆ ಬೀಳಲಿವೆ ಎಂದು ನಿರೀಕ್ಷಿಸಲಾಗಿದೆ. ಇದರ ಜತೆಯಲ್ಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು ಮತ್ತು ಮುಸ್ಲಿಮರ ಮತಗಳೂ ನಿಶಾದ್ ಅವರಿಗೆ ಬೀಳಲಿವೆ ಎಂದು ನಿರೀಕ್ಷಿಸಲಾಗಿದೆ.
ಭೋಜ್‌ಪುರಿ ನಟ ರವಿ ಕಿಶನ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ರವಿ ಭಾರಿ ಪ್ರಮಾಣದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಯೋಗಿ ಆದಿತ್ಯನಾಥ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಹ ತಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರಲ್ಲೇ ತಮ್ಮ ಅಭ್ಯರ್ಥಿ ಬಗ್ಗೆ ಅಸಮಾಧಾನಗಳಿವೆ. ಇದು ಬಿಜೆಪಿಗೆ ಮುಳುವಾಗಬಹುದು.
‘ರವಿ ಕಿಶನ್ ಪ್ರಬಲ ಅಭ್ಯರ್ಥಿ ಅಲ್ಲ. ಕಿಶನ್ ಅವರಿಗೆ ಕ್ಷೇತ್ರದ ಬಗ್ಗೆ ಅರಿವೂ ಇಲ್ಲ. ಆದರೆ ನಮ್ಮ ಅಭ್ಯರ್ಥಿ ಎರಡು ಬಾರಿ ಶಾಸಕರಾಗಿದ್ದವರು ಮತ್ತು ಸಚಿವರಾಗಿದ್ದವರು’ ಎನ್ನುತ್ತಾರೆ ಗೋರಖಪುರ ಎಸ್‌ಪಿ ಘಟಕದ ಅಧ್ಯಕ್ಷ ಪ್ರಹ್ಲಾದ್ ಯಾದವ್.
ಬ್ರಾಹ್ಮಣ ಸಮುದಾಯದ ಮಧುಸೂದನ್ ತ್ರಿಪಾಠಿ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಬಿಜೆಪಿಗೆ ಹೋಗಲಿರುವ ಬ್ರಾಹ್ಮಣ ಮತಗಳನ್ನು ತ್ರಿಪಾಠಿ ವಿಭಜಿಸಲಿದ್ದಾರೆ. ಇದು ಎಸ್‌ಪಿ–ಬಿಎಸ್‌ಪಿ ಅಭ್ಯರ್ಥಿಗೆ ನೆರವಾಗಲಿದೆ. ಬಿಜೆಪಿ ಅಭ್ಯರ್ಥಿಯ ಗೆಲುವು ಕಷ್ಟ ಎಂಬುದು ತಜ್ಞರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.