ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ ಸರ್ಕಾರ ರಚನೆ: ಸಂಗ್ಮಾ, ರಿಯೊ ಪ್ರಮಾಣ

Last Updated 7 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಶಿಲ್ಲಾಂಗ್/ಕೊಹಿಮಾ: ಮೇಘಾಲಯದ ಮುಖ್ಯಮಂತ್ರಿಯಾಗಿ ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್‌ಪಿಪಿ) ಕಾನ್ರಾಡ್ ಸಂಗ್ಮಾ ಮತ್ತು ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ (ಎನ್‌ಡಿಪಿಪಿ) ನೇಫಿಯು ರಿಯೊ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ಮೇಘಾಲಯದಲ್ಲಿ ಮಂಗಳವಾರ ರಾಜ್ಯಪಾಲ ಫಾಗು ಚೌಹಾಣ್ ಅವರು ಕಾನ್ರಾಡ್ ಸಂಗ್ಮಾ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಮೂಲಕ ಸಂಗ್ಮಾ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ.

ಉಪ ಮುಖ್ಯಮಂತ್ರಿಗಳಾಗಿ ಎನ್‌ಪಿಪಿಯ ಪ್ರೆಸ್ಟೋನ್‌ ಟೈನ್‌ಸಾಂಗ್‌ ಮತ್ತು ಸ್ನಿಯಾವ್‌ಭಾಲಾಂಗ್‌ ಧಾರ್‌ ಸೇರಿದಂತೆ 11 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ಅಲೆಗ್ಸಾಂಡರ್‌ ಲಾಲೂ ಹೆಕ್, ಯುಡಿಪಿಯ ಪೌಲ್ ಲಿಂಗ್ಡೊ, ಕಿರ್ಮೆನ್ ಶೈಲ್ಲಾ ಮತ್ತು ಎಚ್‌ಎಸ್‌ಪಿಡಿಪಿಯ ಶಕ್ಲಿಯಾರ್ ವಾರ್ಜ್ರಿ ಅವರೂ ಸಚಿವರಾಗಿ ಅಧಿಕಾರದ ಗೋಪ್ಯತೆ ಸ್ವೀಕರಿಸಿದರು.

ಎನ್‌ಪಿಪಿಯ ಏಳು, ಯುಡಿಪಿಯ ಇಬ್ಬರು, ಬಿಜೆಪಿ ಮತ್ತು ಎಚ್‌ಎಸ್‌ಪಿಡಿಪಿಯ ತಲಾ ಒಬ್ಬರು ಸಂಗ್ಮಾ ಸಂಪುಟ ಸೇರಿದಂತಾಗಿದೆ. ಎನ್‌ಪಿಪಿ ನೇತೃತ್ವದ ಮೈತ್ರಿಕೂಟದಲ್ಲಿ ಎನ್‌ಪಿಪಿಯ 26, ಬಿಜೆಪಿಯ ಇಬ್ಬರು ಸೇರಿದಂತೆ ಒಟ್ಟ 45 ಶಾಸಕರಿದ್ದಾರೆ.

ಚುನಾವಣಾ ಪೂರ್ವದಲ್ಲಿ ಸಂಗ್ಮಾ ಅವರ ಸರ್ಕಾರವನ್ನು ‘ಅತ್ಯಂತ ಭ್ರಷ್ಟ’ ಎಂದು ಬಣ್ಣಿಸಿದ್ದ ಬಿಜೆಪಿ, ಚುನಾವಣಾ ನಂತರ ಮೈತ್ರಿಯೊಂದಿಗೆ ಸರ್ಕಾರ ರಚನೆಯಲ್ಲಿ ಭಾಗಿಯಾಗಿದೆ.

ಐದನೇ ಬಾರಿ ಸಿ.ಎಂ ಆಗಿ ರಿಯೊ: ಎನ್‌ಡಿಪಿಪಿಯ ನೇಫಿಯು ರಿಯೊ ಐದನೇ ಬಾರಿ ನಾಗಾಲ್ಯಾಂಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 72 ವರ್ಷದ ನೇಫಿಯು ರಿಯೊ ಅವರಿಗೆ ರಾಜ್ಯಪಾಲ ಲಾ. ಗಣೇಶನ್‌ ಅಧಿಕಾರದ ಗೋಪ್ಯತೆ ಬೋಧಿಸಿದರು.

ಉಪ ಮುಖ್ಯಮಂತ್ರಿಗಳಾಗಿ ಟಿ.ಆರ್. ಜೆಲಿಯಾಂಗ್ ಮತ್ತು ವೈ.ಪ್ಯಾಟನ್ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯ ಬಿಜೆಪಿ ಮುಖ್ಯಸ್ಥ ತೆಮ್ಜೆನ್ ಇಮ್ನಾ ಅಲಾಂಗ್, ನಾಗಾಲ್ಯಾಂಡ್ ವಿಧಾನಸಭೆಗೆ ಮೊದಲ ಬಾರಿಗೆ ಚುನಾಯಿತರಾದ ಇಬ್ಬರು ಮಹಿಳೆಯರಲ್ಲಿ ಒಬ್ಬರಾದ ಸಲ್ಹೌಟುನೊ ಕ್ರೂಸ್ ಅವರೂ ಸಂಪುಟ ಸೇರಿದ್ದಾರೆ.

ಎನ್‌ಡಿಪಿಪಿ– ಬಿಜೆಪಿ ಮೈತ್ರಿಕೂಟ ಚುನಾವಣೆಯಲ್ಲಿ37 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದೆ. ರಾಜ್ಯದ ಎಲ್ಲಾ ಇತರ ಪಕ್ಷಗಳು ರಿಯೊ ನೇತೃತ್ವದ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿವೆ.

ಮೋದಿ, ಶಾ ಭಾಗಿ
ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾಗವಹಿಸಿದ್ದರು.

ಎರಡೂ ರಾಜ್ಯಗಳ ನೂತನ ಮುಖ್ಯಮಂತ್ರಿಗಳು ಮತ್ತು ನೂತನ ಸಚಿವರಿಗೆ ಟ್ವೀಟ್‌ ಮೂಲಕ ಶುಭ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ‘ಸರ್ಕಾರಗಳು ಜನರ ಆಶೋತ್ತರಗಳನ್ನು ಈಡೇರಿಸುವುದರ ಮೂಲಕ ಉತ್ತಮ ಆಡಳಿತ ನೀಡಲಿ’ ಎಂದಿದ್ದಾರೆ.

*
ರಸ್ತೆ, ಮೂಲ ಸೌಕರ್ಯ, ವಿದ್ಯುತ್‌, ನೀರಿನ ಸಂಪರ್ಕ ಸುಧಾರಿಸುವುದರ ಜತೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೆ ಆದ್ಯತೆ ನೀಡಲಾಗುವುದು
-ಕಾನ್ರಾಡ್ ಸಂಗ್ಮಾ, ಮುಖ್ಯಮಂತ್ರಿ, ಮೇಘಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT