ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಫೇಮ್‌’ ಬದಲು ‘ಪಿಎಂ ಇ–ಡ್ರೈವ್’: ಇ.ವಿ. ಬಳಕೆ ಉತ್ತೇಜಿಸಲು ಕೇಂದ್ರದ ಹೊಸ ಯೋಜನೆ

Published : 11 ಸೆಪ್ಟೆಂಬರ್ 2024, 16:08 IST
Last Updated : 11 ಸೆಪ್ಟೆಂಬರ್ 2024, 16:08 IST
ಫಾಲೋ ಮಾಡಿ
Comments

ನವದೆಹಲಿ: ₹10,900 ಕೋಟಿ ಗಾತ್ರದ, ಎರಡು ವರ್ಷಗಳ ಅವಧಿಯ ‘ಪಿಎಂ ಇ–ಡ್ರೈವ್ ಯೋಜನೆ’ಗೆ ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ. ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಿಸುವುದಕ್ಕೆ ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶ.

ಒಂಬತ್ತು ವರ್ಷ ಚಾಲ್ತಿಯಲ್ಲಿದ್ದ ಫೇಮ್ ಯೋಜನೆಯ ಬದಲಿಗೆ ಈ ಯೋಜನೆಯು ಜಾರಿಗೆ ಬರಲಿದೆ. ಫೇಮ್ ಯೋಜನೆಯು ಮಾರ್ಚ್‌ ತಿಂಗಳಿಗೆ ಅಂತ್ಯಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ‘ಪಿಎಂ ಇ–ಡ್ರೈವ್’ ಯೋಜನೆಗೆ ಅನುಮೋದನೆ ನೀಡಿತು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ಯೋಜನೆಯ ಅಡಿಯಲ್ಲಿ 24.7 ಲಕ್ಷ ಇ.ವಿ. ದ್ವಿಚಕ್ರ ವಾಹನಗಳಿಗೆ, 3.16 ಲಕ್ಷ ಇ.ವಿ. ತ್ರಿಚಕ್ರ ವಾಹನಗಳಿಗೆ ಮತ್ತು 14,082 ಇ.ವಿ. ಬಸ್ಸುಗಳಿಗೆ ನೆರವು ದೊರೆಯಲಿದೆ. ಅಲ್ಲದೆ, 88,500 ಚಾರ್ಜಿಂಗ್ ಕೇಂದ್ರಗಳಿಗೂ ಈ ಯೋಜನೆಯ ಅಡಿಯಲ್ಲಿ ನೆರವು ಲಭ್ಯವಾಗಲಿದೆ ಎಂದು ವೈಷ್ಣವ್ ಮಾಹಿತಿ ನೀಡಿದರು.

ಇ.ವಿ. ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಇ–ಆಂಬುಲೆನ್ಸ್‌ಗಳು ಮತ್ತು ಇ–ಟ್ರಕ್ಕುಗಳ ಬಳಕೆಯನ್ನು ಉತ್ತೇಜಿಸಲು ಹೊಸ ಯೋಜನೆಯು ₹3,679 ಕೋಟಿ ಮೊತ್ತದ ಸಬ್ಸಿಡಿಯನ್ನು ಒದಗಿಸಲಿದೆ.

ರಾಜ್ಯಗಳ ಸಾರಿಗೆ ಸಂಸ್ಥೆಗಳು ಹಾಗೂ ಸಾರ್ವಜನಿಕ ಸಾರಿಗೆ ಸಂಸ್ಥೆಗಳಿಗೆ ಒಟ್ಟು 14,082 ವಿದ್ಯುತ್ ಚಾಲಿತ ಬಸ್ಸುಗಳನ್ನು ಖರೀದಿಸಲು ನೆರವಾಗುವ ಉದ್ದೇಶಕ್ಕೆ ಯೋಜನೆಯ ಅಡಿಯಲ್ಲಿ ₹4,391 ಕೋಟಿ ತೆಗೆದಿರಿಸಲಾಗಿದೆ.

ಮುಂದಿನ ಎಂಟು ವರ್ಷಗಳಲ್ಲಿ, ₹12,461 ಕೋಟಿ ಗಾತ್ರದ 31,350 ಮೆಗಾ ವಾಟ್‌ ಸಾಮರ್ಥ್ಯದ ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಗೆ ನೆರವು ಒದಗಿಸಲು ಸಂಪುಟವು ಒಪ್ಪಿಗೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT