ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಚುನಾವಣೆಯದ್ದೇ ಚಿಂತೆ: ರೈತ ಮುಖಂಡ ಸರವಣ ಸಿಂಗ್‌ ಪಂಢೇರ್‌ ಟೀಕೆ

ರೈತರ ಬೇಡಿಕೆ ಈಡೇರಿಸುವತ್ತ ಗಮನ ಹರಿಸಿಲ್ಲ: ಪಂಢೇರ್‌
Published 1 ಮಾರ್ಚ್ 2024, 14:03 IST
Last Updated 1 ಮಾರ್ಚ್ 2024, 14:03 IST
ಅಕ್ಷರ ಗಾತ್ರ

ಚಂಡೀಗಢ: ಮುಂಬರುವ ಲೋಕಸಭೆ ಚುನಾವಣೆಯನ್ನು ಗೆಲ್ಲುವುದರತ್ತ ಚಿತ್ತ ಹರಿಸಿರುವ ಕೇಂದ್ರ ಸರ್ಕಾರ, ರೈತರ ಬೇಡಿಕೆಗಳನ್ನು ಈಡೇರಿಸಲು ಗಮನ ಹರಿಸುತ್ತಿಲ್ಲ ಎಂದು ರೈತ ಮುಖಂಡ ಸರವಣ ಸಿಂಗ್‌ ಪಂಢೇರ್‌ ಟೀಕಿಸಿದ್ದಾರೆ.

ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಖಾತರಿಗೆ ಕಾಯ್ದೆ ರೂಪಿಸುವುದು ಸೇರಿದಂತೆ, ರೈತರು ಮುಂದಿಟ್ಟಿರುವ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಶುಕ್ರವಾರ ಆಗ್ರಹಿಸಿದರು. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂಬುದನ್ನು ಅವರು ಪುನರುಚ್ಚರಿಸಿದರು. 

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್‌ ಮಜ್ದೂರ್ ಮೋರ್ಚಾ (ಕೆಎಂಎಂ) ‘ದೆಹಲಿ ಚಲೋ’ ಪ್ರತಿಭಟನೆ ನಡೆಸುತ್ತಿದೆ. ರೈತ ಮುಖಂಡರು ಮಾತುಕತೆ ನಡೆಸಿ ಮುಂದಿನ ನಡೆ ಕುರಿತು ತೀರ್ಮಾನಿಸಲಿದ್ದಾರೆ ಎಂದು ಅವರು ಹೇಳಿದರು.

ಫೆಬ್ರುವರಿ 21ರಂದು ಪಂಜಾಬ್‌– ಹರಿಯಾಣದ ಖನೌರಿ ಗಡಿಯಲ್ಲಿ ರೈತರು ಮತ್ತು ಪೊಲೀಸರ ನಡುವಣ ಘರ್ಷಣೆಯಲ್ಲಿ ಯುವ ರೈತ ಶುಭಕರಣ್‌ ಸಿಂಗ್‌ ಮೃತಪಟ್ಟಿದ್ದರು. ಇದರಿಂದ ರೈತ ಮುಖಂಡರು ‘ದೆಹಲಿ ಚಲೋ’ಗೆ ವಿರಾಮ ಘೋಷಿಸಿದ್ದರು. ಮುಂದಿನ ತೀರ್ಮಾನವನ್ನು ಫೆ.29 ರಂದು ಪ್ರಕಟಿಸುವುದಾಗಿ ಹೇಳಿದ್ದರೂ, ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

‘ದೆಹಲಿ ಚಲೋ’ ಪ್ರತಿಭಟನೆಯ ಭಾಗವಾಗಿ ಸಾವಿರಾರು ರೈತರು ಪಂಜಾಬ್ ಮತ್ತು ಹರಿಯಾಣ ನಡುವಿನ ಖನೌರಿ ಮತ್ತು ಶಂಭು ಗಡಿ ಭಾಗದಲ್ಲಿ ಬೀಡುಬಿಟ್ಟಿದ್ದಾರೆ.

ಶುಭಕರಣ್‌ಗೆ ಶ್ರದ್ಧಾಂಜಲಿ ಸಲ್ಲಿಸಲು ಅವರ ಹುಟ್ಟೂರು ಬಠಿಂಡಾದ ಬಲೋಹ್ ಗ್ರಾಮದಲ್ಲಿ ಮಾರ್ಚ್ 3 ರಂದು ಸಭೆ ಆಯೋಜಿಸಲಾಗಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಂಢೇರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT