ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆದಾರನಿಂದ ಹೆಚ್ಚು ವರಮಾನ: ದೂರಸಂಪರ್ಕ ಕಂಪನಿಗಳ ನಿರೀಕ್ಷೆ

Published 29 ಅಕ್ಟೋಬರ್ 2023, 14:47 IST
Last Updated 29 ಅಕ್ಟೋಬರ್ 2023, 14:47 IST
ಅಕ್ಷರ ಗಾತ್ರ

ನವದೆಹಲಿ: ದೂರಸಂಪರ್ಕ ಕಂಪನಿಗಳು 5ಜಿ ಜಾಲಕ್ಕಾಗಿ ಮಾಡಿರುವ ಹೂಡಿಕೆಯನ್ನು ಮರಳಿ ಪಡೆಯಬೇಕಾದರೆ ಪ್ರತಿ ಬಳಕೆದಾರನಿಂದ ವರ್ಷಕ್ಕೆ ₹270ರಿಂದ ₹300 ವರಮಾನ ಬರಬೇಕು ಎಂಬುದು ಈ  ಕ್ಷೇತ್ರದ ಪರಿಣತರ ಅಭಿಪ್ರಾಯವಾಗಿದೆ. ಆದರೆ, ಈಗ ಈ ಕ್ಷೇತ್ರವು ಪ್ರತಿ ಬಳಕೆದಾರನಿಂದ ಪಡೆಯುತ್ತಿರುವ ವರಮಾನವು ₹140ರಿಂದ ₹200 ಮಾತ್ರ. ಜಾಗತಿಕ ಸರಾಸರಿಯು ₹600ರಿಂದ ₹850ರಷ್ಟಿದೆ. ಚೀನಾದ ಕಂಪನಿಗಳು ಪ್ರತಿ ಬಳಕೆದಾರನಿಂದ ವರ್ಷಕ್ಕೆ ₹580 ವರಮಾನ ಪಡೆಯುತ್ತಿವೆ. 

ಅತಿ ಹೆಚ್ಚು ಬಳಕೆಯಾಗುವ 4–5 ಆ್ಯಪ್‌ಗಳು ವರಮಾನ ಹಂಚಿಕೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕೊಡಬೇಕು ಎಂಬ ಬೇಡಿಕೆಯನ್ನು ದೂರಸಂಪರ್ಕ ಸೇವಾ ಕಂಪನಿಗಳು ಇರಿಸಿವೆ. ಹೀಗಾದರೆ, 5ಜಿ ಜಾಲಕ್ಕೆ ಮಾಡಿರುವ ವೆಚ್ಚದ ಒಂದು ಭಾಗವನ್ನು ‍ಪಡೆದುಕೊಳ್ಳಬಹುದು ಎಂಬುದು ಈ ಕಂಪನಿಗಳ ಪ್ರತಿಪಾದನೆಯಾಗಿದೆ. 

ಆದರೆ, ಭಾರತದ ದೂರಸಂಪರ್ಕ ಸೇವೆಯು ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ವೆಚ್ಚದ್ದಾಗಿರಬೇಕು ಎಂದು ಸರ್ಕಾರ ಬಯಸುತ್ತಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ. 

‘ಸರ್ಕಾರದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಭಾರತದಲ್ಲಿ ದೂರಸಂಪರ್ಕ ಸೇವೆಯು ಬಹಳ ಕಡಿಮೆ ವೆಚ್ಚದ್ದಾಗಿರಬೇಕು. ಈಗಲೂ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದ ದೂರಸಂಪರ್ಕ ಸೇವೆಯು ಮಿತವ್ಯಯಕರವೇ ಆಗಿದೆ’ ಎಂದು ಇಂಡಿಯಾ ಮೊಬೈಲ್ ಕಾಂಗ್ರೆಸ್‌–2023ರಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವೈಷ್ಣವ್‌ ಹೇಳಿದ್ದಾರೆ. 

ದೇಶದಲ್ಲಿ 5ಜಿ ಸೇವೆಗೆ ಕಳೆದ ವರ್ಷವೇ ಚಾಲನೆ ನೀಡಿದ್ದರೂ ಅದರಿಂದ ವರಮಾನ ಬರಲು ಆರಂಭವಾಗಿಲ್ಲ ಎಂದು ಭಾರತದ ಸೆಲ್ಯುಲಾರ್‌ ನಿರ್ವಾಹಕರ ಸಂಘವು ಹೇಳಿದೆ.

6ಜಿ ತಂತ್ರಜ್ಞಾನ ಅಭಿವೃದ್ಧಿ ಕುರಿತು ಕೆಲಸ ಈಗಾಗಲೇ ಆರಂಭವಾಗಿದೆ. ‘ಭಾರತ್‌ 6ಜಿ ವಿಷನ್‌’ಗೆ ಅಂತರರಾಷ್ಟ್ರೀಯ ದೂರಸಂಪರ್ಕ ಸಂಘಟನೆಯು ಅನುಮೋದನೆ ನೀಡಿದೆ ಎಂದು ವೈಷ್ಣವ್‌ ತಿಳಿಸಿದ್ದಾರೆ. 

6ಜಿ ಅಭಿವೃದ್ಧಿಯಲ್ಲಿ ಉದ್ಯಮ, ಶೈಕ್ಷಣಿಕ ವಲಯ, ವಿದ್ಯಾರ್ಥಿಗಳು ಮತ್ತು ಸರ್ಕಾರದ ಸಹಭಾಗಿತ್ವ ಇರಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT