ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮೆಟ್ರೊ ರೈಲುಗಳಲ್ಲಿ ಕೇಜ್ರಿವಾಲ್‌ಗೆ ಬೆದರಿಕೆ ಬರಹ

Published 20 ಮೇ 2024, 14:09 IST
Last Updated 20 ಮೇ 2024, 14:09 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮೆಟ್ರೊ ರೈಲುಗಳಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕುವ ಬರಹ ಗೀಚಲಾಗಿದೆ. ಈ ಘಟನೆಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆಮ್ ಆದ್ಮಿ ಪಕ್ಷ ಸೋಮವಾರ ಆರೋಪಿಸಿದೆ.

‘ಬಿಜೆಪಿಯು ದೆಹಲಿಯಲ್ಲಿ ಎಲ್ಲ ಏಳು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿರುವ ಸಂಗತಿಯಿಂದ ಗಲಿಬಿಲಿಗೊಂಡಿದೆ. ಹಾಗಾಗಿಯೇ ಅದು ಕೇಜ್ರಿವಾಲ್‌ ಅವರನ್ನು ಗುರಿಯಾಗಿಸಿಕೊಂಡು ಇಂತಹ ವಿಭಿನ್ನ ಷಡ್ಯಂತ್ರಗಳನ್ನು ಹೆಣೆಯುತ್ತಿದೆ‘ ಎಂದು ಎಎಪಿ ನಾಯಕಿ, ದೆಹಲಿ ಸಚಿವೆ ಆತಿಶಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

‘ರಾಜೀವ್ ಚೌಕ, ಪಟೇಲ್ ಚೌಕ ಮತ್ತು ಪಟೇಲ್ ನಗರ ಈ ಮೂರು ಮೆಟ್ರೊ ನಿಲ್ದಾಣಗಳ ಗೋಡೆಗಳ ಮೇಲೂ ವ್ಯಕ್ತಿಯೊಬ್ಬ ಗೀಚುಬರಹ ಬರೆದು ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದಾನೆ. ಕೇಜ್ರಿವಾಲ್‌ ಅವರ ಪ್ರಾಣಕ್ಕೆ ಈಗ ಅಪಾಯವಿದೆ‘ ಎಂದು ಆತಿಶಿ ದೂರಿದ್ದಾರೆ.

‘ಅವರು ಮಾರ್ಚ್ 21ರಂದು ಕೇಜ್ರಿವಾಲ್‌ ಅವರನ್ನು ಬಂಧಿಸಿದರು. ನಂತರ ತಿಹಾರ್ ಜೈಲಿನಲ್ಲಿ ಇರಿಸಿ, ಅವರಿಗೆ 15 ದಿನಗಳವರೆಗೆ ಇನ್ಸುಲಿನ್ ನೀಡುವುದನ್ನು ನಿಲ್ಲಿಸಿದರು. ಆಗ ನಾವು ನ್ಯಾಯಾಲಯವನ್ನು ಸಂಪರ್ಕಿಸಬೇಕಾಯಿತು. ಜೈಲಿನಿಂದ ಹೊರಗೆ ಬಂದ ಕೇಜ್ರಿವಾಲ್‌ ಅವರನ್ನು ಗುರಿಯಾಗಿಸಲು ಅವರು ಸ್ವಾತಿ ಮಲಿವಾಲ್ ಅವರನ್ನು ಬಳಸಿಕೊಂಡರು. ಆದರೆ, ಸ್ವಾತಿ ಮೇಲೆ ಹಲ್ಲೆ ನಡೆ‌ದ ಆರೋಪಗಳು ಸುಳ್ಳೆಂದು ಸಾಬೀತುಪಡಿಸುವ ವಿಡಿಯೊಗಳನ್ನು ಬಹಿರಂಗಪಡಿಸಿದ ನಂತರ ಅವರ ಈ ಷಡ್ಯಂತ್ರವು ಫಲಿಸಲಿಲ್ಲ’ ಎಂದು ಆತಿಶಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

‘ಗೀಚುಬರಹದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ನಿಲ್ದಾಣಗಳು ಸಿ.ಸಿ.ಟಿ.ವಿ. ಕ್ಯಾಮೆರಾಗಳ ನಿಗಾದಲ್ಲಿವೆ. ದಿನದ 24 ತಾಸು ಮೆಟ್ರೊ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಯ ಕಾವಲಿರುತ್ತದೆ. ಆದಾಗ್ಯೂ ಪೊಲೀಸರು ಏಕೆ ಕ್ರಮ ತೆಗೆದುಕೊಂಡಿಲ್ಲ. ಸೈಬರ್ ಸೆಲ್ ಎಲ್ಲಿದೆ? ಇದೆಲ್ಲವೂ ಬಿಜೆಪಿಯ ಸಂಚಿನಿಂದ ನಡೆಯುತ್ತಿದೆ ಎನ್ನುವುದನ್ನು ತೋರಿಸುತ್ತದೆ’ ಎಂದು ಅವರು ಆರೋಪಿಸಿದ್ದಾರೆ.  

ತನಿಖೆ ಆರಂಭಿಸಿದ ದೆಹಲಿ ಪೊಲೀಸರು

ನವದೆಹಲಿ: ಅರವಿಂದ ಕೇಜ್ರಿವಾಲ್‌ ಅವರನ್ನು ಉದ್ದೇಶಿಸಿ ಮೆಟ್ರೊದ ಹಲವು ರೈಲುಗಳಲ್ಲಿ ಮತ್ತು ಮೂರು ನಿಲ್ದಾಣಗಳ ಗೋಡೆಗಳ ಮೇಲೆ ಬೆದರಿಕೆಯ ‌ಸಂದೇಶ ಗೀಚಿರುವುದು ಕಂಡುಬಂದ ನಂತರ ಘಟನೆಯ ಬಗ್ಗೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ವಿಧ್ವಂಸಕ ಕೃತ್ಯದ ಬಗ್ಗೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸಂಬಂಧಪಟ್ಟ ಮೆಟ್ರೊ ಪೊಲೀಸ್ ಠಾಣೆಯಲ್ಲಿ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪೊಲೀಸ್ ಅಧಿಕಾರಿಯ ಪ್ರಕಾರ ಮೆಟ್ರೊ ರೈಲುಗಳು ಮತ್ತು ನಿಲ್ದಾಣಗಳಲ್ಲಿ ಬರೆಯಲಾದ ಕೆಲವು ಸಂದೇಶಗಳ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ‘ankit.goel_91’ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ. ಪಟೇಲ್ ನಗರ ರಮೇಶ್ ನಗರ ಮತ್ತು ರಾಜೀವ್ ಚೌಕ ಈ ಮೂರು ಮೆಟ್ರೊ ನಿಲ್ದಾಣಗಳಲ್ಲಿ ಬೆದರಿಕೆಯ ಸಂದೇಶ ಗೀಚಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

ಮೆಟ್ರೊ ರೈಲಿನಲ್ಲಿ ಬರೆದಿರುವ ಒಂದು ಗೀಚು ಬರಹ ಈ ರೀತಿ ಇದೆ; ‘ಕೇಜ್ರಿವಾಲ್‌ ದೆಹಲಿ ಬಿಟ್ಟು ಹೋಗಿ. ದಯವಿಟ್ಟು ಇಲ್ಲದಿ‌ದ್ದರೆ ನೀವು ಚುನಾವಣೆಗೂ ಮೊದಲು ಹೇಳಿದ್ದ ಕಪಾಳ ಮೋಕ್ಷವನ್ನು ನಾವು ನಿಮಗೆ ನೆನಪಿಸಬೇಕಾಗುತ್ತದೆ. ಝಂಡೇವಾಲನ್‌ನಲ್ಲಿ ಇಂದಿನ ಸಭೆಯಲ್ಲಿ ಈಗ ನಿಜವಾದ ಹೊಡೆತ ಕಪಾಳಮೋಕ್ಷ ನಿಮಗೆ ಶೀಘ್ರ ಪ್ರಾಪ್ತಿ’. ಮತ್ತೊಂದು ಸಂದೇಶದಲ್ಲಿ ‘ದೆಹಲಿ ಸಿ.ಎಂ ತೊಲಗಿ ₹45 ಕೋಟಿಯ ಸಿ.ಎಂ ನಿವಾಸ ನಿಮ್ಮ ಉಚಿತ ಕೊಡುಗೆಗಳು ನಮಗೆ ಇನ್ನು ಬೇಕಿಲ್ಲ’. ಸುದೀರ್ಘವಾದ ಮತ್ತೊಂದು ಗೀಚು ಬರಹದಲ್ಲಿ ‘ಜಲ ಮಂಡಳಿ ಪಾರದರ್ಶಕ ಲೆಕ್ಕಪರಿಶೋಧನೆ ಆಗಬೇಕು ಮತ್ತು ಇದರಲ್ಲಿ ಸಂಬಂಧಪಟ್ಟ ವ್ಯಕ್ತಿ/ನಾಯಕನನ್ನು ಹೊಣೆಯಾಗಿಸಬೇಕು. ಅಬಕಾರಿ ನೀತಿ ಮತ್ತು ನಿಮ್ಮ ಪಕ್ಷ ಹಾಗೂ ನಾಯಕರು ಪಡೆದ ಕಿಕ್‌ಬ್ಯಾಕ್ ಕುರಿತು ನಿಮ್ಮ ಅಂತಿಮ ಹೇಳಿಕೆ ಏನು? ರಾಘವ್ ಚಡ್ಡಾ ಅವರ ನೇತ್ರ ಚಿಕಿತ್ಸೆ ಏಮ್ಸ್‌ ಅಥವಾ ಸಫ್ದರ್‌ಜಂಗ್‌ ಅಥವಾ ಭಾರತದ ಯಾವುದಾದರೂ ಆಸ್ಪತ್ರೆ ನಿಮ್ಮ ಆಯ್ಕೆಯಾಗಿತ್ತಾ? ಎಎಪಿಯಿಂದ ಅಂತಿಮ ನಿರೀಕ್ಷೆ ಏನು’ ಎಂದು ಪ್ರಶ್ನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT