ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಭಾಷಣ ಪ್ರಕರಣ; ಮುಸ್ಲಿಂ ಧರ್ಮ ಬೋಧಕನ ಬಂಧನ

Published 5 ಫೆಬ್ರುವರಿ 2024, 14:07 IST
Last Updated 5 ಫೆಬ್ರುವರಿ 2024, 14:07 IST
ಅಕ್ಷರ ಗಾತ್ರ

ಜುನಾಗಢ: ದ್ವೇಷ ಭಾಷಣ ಆರೋಪದ ಮೇಲೆ ಮುಸ್ಲಿಂ ಧರ್ಮ ಬೋಧಕ ಮುಫ್ತಿ ಸಲ್ಮಾನ್ ಅಝರಿ ಅವರನ್ನು ಮುಂಬೈನಲ್ಲಿ ಬಂಧಿಸಲಾಗಿದ್ದು, ಗುಜರಾತ್‌ಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಜುನಾಗಢ ನಗರದ 'ಬಿ' ಡಿವಿಷನ್ ಪೊಲೀಸ್ ಠಾಣೆಯ ಸನಿಹದ ಮೈದಾನದಲ್ಲಿ ಜನವರಿ 31ರಂದು ನಡೆದ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಮುಫ್ತಿ ಸಲ್ಮಾನ್ ಅಝರಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.              

ಧರ್ಮ‍ ಬೋಧನೆ ಮತ್ತು ವ್ಯಸನ ಮುಕ್ತತೆಯ ಬಗ್ಗೆ ಪ್ರಚಾರ ಮಾಡಲಾಗುತ್ತದೆ ಎಂದು ಕಾರ್ಯಕ್ರಮದ ಆಯೋಜಕರು ಅನುಮತಿ ಪಡೆದಿದ್ದರು. ಆದರೆ, ಕಾರ್ಯಕ್ರಮದಲ್ಲಿ ಅಝರಿ ದ್ವೇಷ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಎಫ್‌ಐಆರ್ ದಾಖಲಾಗಿತ್ತು. ಕಾರ್ಯಕ್ರಮ ಆಯೋಜಕರಾದ ಮೊಹಮದ್ ಯೂಸುಫ್ ಮಾಲೇಕ್, ಅಜೀಂ ಹಬೀಬ್ ಒಡೇಡರ ಅವರನ್ನು ಐಪಿಸಿ 153ಬಿ (ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದನೆ), 505 (2) (ಸಾರ್ವಜನಿಕ ಹಾನಿಗೆ ಕಾರಣವಾಗುವ ಹೇಳಿಕೆ ನೀಡುವುದು) ಅಡಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಲೇಕ್ ಮತ್ತು ಹಬೀಬ್ ಅವರನ್ನು ಶನಿವಾರ ಬಂಧಿಸಿದ್ದ ಜುನಾಗಢದ ಪೊಲೀಸರು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ ನೆರವಿನೊಂದಿಗೆ ಅಝರಿ ಅವರನ್ನು ಭಾನುವಾರ ಮುಂಬೈನಲ್ಲಿ ಬಂಧಿಸಿದ್ದಾರೆ.

ಗುಜರಾತ್ ಪೊಲೀಸರು ಮುಂಬೈನಲ್ಲಿ ಅಝರಿ ಅವರನ್ನು ವಶಕ್ಕೆ ಪಡೆದ ನಂತರ ಅವರ ನೂರಾರು ಬೆಂಬಲಿಗರು ಘಟ್ಕೋಪರ್ ಠಾಣೆಯ ಮುಂದೆ ಜಮಾಯಿಸಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು. ಇದರಿಂದ, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT