ನವದೆಹಲಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಗೆ ಅವಕಾಶ ಕಲ್ಪಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೊರ್ಟ್ ಮೆಟ್ಟಿಲೇರಿರುವ ಮಸೀದಿ ನಿರ್ವಹಣಾ ಸಮಿತಿ (ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿ), ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಸಮೀಕ್ಷೆಯಿಂದ ಹಳೇ ಗಾಯ ಮತ್ತೆ ತೆರೆದುಕೊಳ್ಳಲಿದೆ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದ ಎದುರು ಹಾಜರಾದ ಮಸೀದಿ ನಿರ್ವಹಣಾ ಸಮಿತಿ ಪರ ಹಿರಿಯ ವಕೀಲ ಹುಜೆಫಾ ಅಹ್ಮದಿ ಅವರು, ಎಎಸ್‌ಐ ಸಮೀಕ್ಷೆಯು 'ಇತಿಹಾಸವನ್ನು ಅಗೆಯಲಿದೆ'. ಇದರಿಂದ ಪೂಜಾ ಸ್ಥಳಗಳ ಕಾನೂನು ಉಲ್ಲಂಘನೆಯಾಗಲಿದ್ದು, ಭ್ರಾತೃತ್ವ ಮತ್ತು ಜಾತ್ಯತೀತತೆಗೆ ಧಕ್ಕೆಯಾಗಲಿದೆ ಎಂದು ವಾದಿಸಿದ್ದಾರೆ.
ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, 'ಪ್ರತಿಯೊಂದು ಮಧ್ಯಂತರ ಆದೇಶವನ್ನು ಇದೇ ನೆಲೆಯಲ್ಲಿ ವಿರೋಧಿಸಲಾಗದು. ನಿಮ್ಮ ಆಕ್ಷೇಪಣೆಗಳನ್ನು ವಿಚಾರಣೆ ವೇಳೆ ನಿರ್ಧರಿಸಲಾಗುತ್ತದೆ' ಎಂದು ಪ್ರತಿಕ್ರಿಯಿಸಿದೆ.
ಸಮೀಕ್ಷೆಗೆ ಅವಕಾಶ ಕಲ್ಪಿಸಿರುವ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಸೀದಿ ನಿರ್ವಹಣಾ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ.
ಈ ವೇಳೆ ಅಲಹಾಬಾದ್ ಹೈಕೋರ್ಟ್ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಹ್ಮದಿ, '500 ವರ್ಷಗಳ ಹಿಂದೆ ಏನಾಯಿತು ಎಂಬ ಇತಿಹಾಸವನ್ನು ಕಂಡುಕೊಳ್ಳುವುದು ಎಎಸ್‌ಐ ಸಮೀಕ್ಷೆಯ ಆಶಯವಾಗಿದೆ. ಇದರಿಂದ ಹಳೆಯ ಗಾಯ ಮತ್ತೆ ತೆರೆದುಕೊಳ್ಳಲಿದೆ. 1947ರಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಸ್ಥಳಗಳ ರಚನೆಯನ್ನು ಬದಲಿಸುವುದನ್ನು ನಿರ್ಬಂಧಿಸುವ 1991ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯ ಉಲ್ಲಂಘನೆಯಾಗುತ್ತದೆ' ಎಂದು ಹೇಳಿದ್ದಾರೆ.
ಇವನ್ನೂ ಓದಿ
* ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ
* ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಜ್ಞಾನವಾಪಿ ಮಸೀದಿ ಸಮಿತಿ
* Gyanvapi ASI Survey | ದೇಗುಲವಿದ್ದ ಜಾಗದಲ್ಲಿ ಮಸೀದಿ..?; ಈವರೆಗಿನ ಘಟನಾವಳಿ...
* ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆ ಇಂದು: ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ
* ಶುಕ್ರವಾರದ ಪ್ರಾರ್ಥನೆ ಬಳಿಕ ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆ ಮರು ಆರಂಭ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.