ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದ 11 ಮಂದಿ ಸಾವು: ಭಗವಂತನ ಪವಾಡಕ್ಕೆ ಕಾದು ಹೆಣವಾದರು?

Last Updated 2 ಜುಲೈ 2018, 13:27 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ದೆಹಲಿಯಲ್ಲಿ ಒಂದೇ ಕುಟುಂಬದ 11 ಮಂದಿ ನಿಗೂಢವಾಗಿ ಮೃತಪಟ್ಟ ಮನೆಯಲ್ಲಿ ತನಿಖೆ ವೇಳೆ ಕೈಬರಹದ ಚೀಟಿಗಳು ಪತ್ತೆಯಾಗಿದ್ದು, ಕುಟುಂಬದವರು ಅಧ್ಯಾತ್ಮ ಅಥವಾ ಮಾಂತ್ರಿಕ ಆಚರಣೆಯಲ್ಲಿ ತೊಡಗಿದ್ದಿರಬಹುದೆಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಕುಟುಂಬದವರು ವಿಷಯವೊಂದರ ಮೇಲೆ ಗಾಢವಾಗಿ ನಂಬಿಕೆ ಇರಿಸಿಕೊಂಡಿದ್ದರು ಎಂದು ತೋರುತ್ತದೆ. ನೇಣಿಗೆ ಕೊರಳೊಡ್ಡುವ ಕ್ಷಣದಲ್ಲಿ ದೇವರು ಪವಾಡ ಸದೃಶ್ಯ ರೀ‌ತಿಯಲ್ಲಿ ನಮ್ಮನ್ನು ರಕ್ಷಿಸುತ್ತಾನೆ ಎಂದು ಆ ಕುಟುಂಬ ಭಾವಿಸಿದಂತಿದೆ ಎಂದು ಹೇಳಿದ್ದಾರೆ.

ಕೈಬರಹದ ಚೀಟಿಗಳಲ್ಲಿನ ಅಂಶಗಳನ್ನು ಗಮನಿಸಿದಾಗ ‘ಆ ಕುಟುಂಬ ತಮ್ಮ ನಂಬಿಕೆ ಮತ್ತು ಆಚರಣೆಗಳನ್ನು ಪ್ರತಿ ಹೆಜ್ಜೆಯಲ್ಲಿಯೂ ಕಟ್ಟುನಿಟ್ಟಾಗಿ, ಚಾಚೂ ತಪ್ಪದೆ ಪಾಲಿಸುತ್ತಿದ್ದರು’ ಎಂದೆನಿಸುತ್ತದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಮೃತಪಟ್ಟ 11 ಮಂದಿ ಪೈಕಿ ಇಬ್ಬರು ಮಕ್ಕಳು ಸೇರಿದಂತೆ ಆರು ಜನರ ಶವ ಪರೀಕ್ಷೆ ಮಾಡಲಾಗಿದೆ. ಅವರು ಸಾಯುವ ವೇಳೆ ನರಳಿಲ್ಲ, ಹಿಂಸೆಪಟ್ಟಿಲ್ಲ. ಈ ಸಂಬಂಧ ಅವರ ದೇಹದ ಮೇಲೆ ಯಾವುದೇ ಗುರುತುಗಳಿಲ್ಲ ಎಂದು ವರದಿಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ ಏಳು ಮಹಿಳೆಯರು, ನಾಲ್ವರು ಪುರುಷರು ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದರು. ಕೆಲವು ದೇಹಗಳು ಮನೆಯ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದವು. ಇನ್ನು ಕೆಲವು ದೇಹಗಳು ಕಣ್ಣು, ಕೈ, ಕಾಲು ಕಟ್ಟಿ ಬಾಯಿ ಮುಚ್ಚಿದ ಸ್ಥಿತಿಯಲ್ಲಿ ನೆಲದ ಮೇಲೆ ಇದ್ದವು ಎಂದು ಪೊಲೀಸರು ಭಾನುವಾರ ತಿಳಿಸಿದ್ದರು.

ಈ ಕುಟುಂಬದವರು ಮೂಲತಃ ರಾಜಸ್ಥಾನದವರಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಕುಟುಂಬದ ಭೂಪಿಂದರ್ ಹಾಗೂ ಲಲಿತ್ ಸಿಂಗ್ ಮನೆಯಲ್ಲಿಯೇ ದಿನಸಿ ಅಂಗಡಿ ನಡೆಸುತ್ತಿದ್ದರು.

ಮೃತರಲ್ಲಿ ನಾರಾಯಣ ದೇವಿ (75), ಅವರ ಪುತ್ರಿ ಪ್ರತಿಭಾ (57), ‍ಪುತ್ರರಾದ ಭಾವನೇಶ್‌ (50), ಲಲಿತ್‌ ಭಾಟಿಯಾ (45) ಭಾವನೇಶ್‌ ಅವರ ಪತ್ನಿ ಸವಿತಾ (48), ಮಕ್ಕಳಾದ ಮೀನು (23), ನಿಧಿ (25), ಧ್ರುವ್‌ (15), ಲಲಿತ್‌ ಅವರ ಪತ್ನಿ ಟೀನಾ (42), ಮಗ ಶಿವಂ (15), ಕಳೆದ ತಿಂಗಳು ನಿಶ್ಚಿತಾರ್ಥ ಆಗಿದ್ದ ಪ್ರತಿಭಾ ಅವರ ಪುತ್ರಿ ಪ್ರಿಯಾಂಕಾ (33) ಸೇರಿದ್ದಾರೆ. ಪತಿಯನ್ನು ಕಳೆದುಕೊಂಡಿದ್ದ ಪ್ರತಿಭಾ ಮಗಳೊಂದಿಗೆ ಅಣ್ಣಂದಿರ ಮನೆಯಲ್ಲಿ ನೆಲೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT