ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೂಜಾ ಖೇಡ್ಕರ್ ಬಂಧಿಸದಂತೆ ನೀಡಿದ್ದ ತಡೆಯಾಜ್ಞೆ ಸೆ.5ರವರೆಗೆ ವಿಸ್ತರಣೆ

Published 29 ಆಗಸ್ಟ್ 2024, 13:03 IST
Last Updated 29 ಆಗಸ್ಟ್ 2024, 13:03 IST
ಅಕ್ಷರ ಗಾತ್ರ

ನವದೆಹಲಿ: ಐಎಎಸ್‌ ಪ್ರೊಬೇಷನರಿ ಹುದ್ದೆಯಿಂದ ಪದಚ್ಯುತರಾಗಿರುವ ಪೂಜಾ ಖೇಡ್ಕರ್ ಅವರನ್ನು ಬಂಧಿಸದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ದೆಹಲಿ ಹೈಕೋರ್ಟ್‌ ಸೆ. 5ರವರೆಗೆ ವಿಸ್ತರಿಸಿದೆ.

ಸುಳ್ಳು ದಾಖಲೆ ಒದಗಿಸುವ ಮೂಲಕ ಪೂಜಾ ಅವರು ಒಬಿಸಿ ಕೋಟಾ, ಅಂಗವಿಕಲರ ಕೋಟಾದ ಸೌಲಭ್ಯಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ. ಈ ಆರೋಪ ಸಾಬೀತಾಗಿದೆ ಎಂದು ಹೇಳಿದ್ದ ಯುಪಿಎಸ್‌ಸಿ, ಇತ್ತೀಚೆಗೆ ಇವರ ಆಯ್ಕೆಯನ್ನು ಅನೂರ್ಜಿತಗೊಳಿಸಿತ್ತು.

ಸುಳ್ಳು ದಾಖಲೆ ಸಲ್ಲಿಕೆ ಕುರಿತ ಯುಪಿಎಸ್‌ಸಿ, ದೆಹಲಿ ಪೊಲೀಸರ ಆರೋಪ ನಿರಾಕರಿಸಿರುವ ಪೂಜಾ, ‘ನಾನು ವಂಚನೆ ಎಸಗಿಲ್ಲ. ಯಶಸ್ವಿಯಾಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದೇನೆ’ ಎಂದು ಹೇಳಿದ್ದಾರೆ.

ದೆಹಲಿ ಹೈಕೋರ್ಟ್‌ಗೆ ಈ ಬಗ್ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ, ‘ಐಎಎಸ್‌ ಪ್ರೊಬೇಷನರಿ ಅಧಿಕಾರಿಯಾಗಿ ನನ್ನ ಆಯ್ಕೆಯನ್ನು ರದ್ದುಪಡಿಸುವ ಅಧಿಕಾರ ಈಗ ಯುಪಿಎಸ್‌ಸಿಗೆ ಇಲ್ಲ’ ಎಂದು ವಾದಿಸಿದ್ದಾರೆ. 

‘ನನ್ನ ಆಯ್ಕೆಯು ಸಂಬಂಧಿಸಿದ ಕೋಟಾದಲ್ಲಿ ಮೆರಿಟ್‌ ಆಧಾರದಲ್ಲಿ ನಡೆದಿದೆ. ಈ ಕೋಟಾದಲ್ಲಿ ಒಟ್ಟು 9 ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ನಾನು ಐದನೇ ಅವಕಾಶದಲ್ಲಿ ಯಶಸ್ವಿಯಾಗಿದ್ದೇನೆ. ಅದಕ್ಕೂ ಹಿಂದೆ, 2012ರಿಂದ 2017ರವರೆಗಿನ ನಾಲ್ಕು ಪ್ರಯತ್ನಗಳಲ್ಲಿ ನಾನು ಈ ಕೋಟಾದಲ್ಲಿ ಪರೀಕ್ಷೆ ಬರೆದಿರಲಿಲ್ಲ. ಹೀಗಾಗಿ, ಆಗ ಅಂಗವಿಕಲ ಅಭ್ಯರ್ಥಿ ಎಂದು ಗುರುತಿಸಲಾಗದು’ ಎಂದು ಪ್ರತಿಪಾದಿಸಿದ್ದಾರೆ.

‘ಹೆಸರನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಯುಪಿಎಸ್‌ಸಿ ಈಗ ಪ್ರತಿಪಾದಿಸುವುದು ಸರಿಯಲ್ಲ. ವ್ಯಕ್ತಿಗತ ಪರೀಕ್ಷೆ ಮತ್ತು ದಾಖಲಾತಿಗಳ ತಪಾಸಣೆಯ ವೇಳೆ ಯುಪಿಎಸ್‌ಸಿ ಸ್ವತಃ ಈ ದಾಖಲೆಗಳು ಮತ್ತು ನನ್ನ ಗುರುತನ್ನು ಬಯೊಮೆಟ್ರಿಕ್‌ ವ್ಯವಸ್ಥೆಯ ಮೂಲಕ ಪರಿಶೀಲನೆ ನಡೆಸಿದೆ. 2012ರಿಂದ 2022ರವರೆಗೆ ಸಲ್ಲಿಸಿರುವ ಸವಿವರ ಅರ್ಜಿ ನಮೂನೆಗಳಲ್ಲಿ ನಮೂದಿಸಿರುವಂತೆ ನನ್ನ ಹೆಸರು ಮತ್ತು ಉಪನಾಮ (ಸರ್ ನೇಮ್) ಏಕರೂಪವಾಗಿಯೇ ಇದೆ’ ಎಂದು ಪೂಜಾ ಅವರು ವಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT