ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತಕ್ಕೆ ಒಪ್ಪದ ಗರ್ಭಿಣಿ ಬಾಲಕಿಯನ್ನು ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿ: ಹೈಕೋರ್ಟ್

Published 6 ಜೂನ್ 2023, 11:31 IST
Last Updated 6 ಜೂನ್ 2023, 11:31 IST
ಅಕ್ಷರ ಗಾತ್ರ

ನವದೆಹಲಿ: 14 ವರ್ಷ ವಯಸ್ಸಿನ ಗರ್ಭಿಣಿ ಬಾಲಕಿ ಹಾಗೂ ಆಕೆಯ ಪೋಷಕರು ವೈದ್ಯಕೀಯ ಗರ್ಭಪಾತಕ್ಕೆ ಒಪ್ಪಿಗೆ ನಿರಾಕರಿಸಿದ ಕಾರಣ, ಅಗತ್ಯ ಆರೈಕೆಗಾಗಿ ಬಾಲಕಿಯನ್ನು ಗರ್ಭಿಣಿ ಮತ್ತು ಮಕ್ಕಳ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲು ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. 

ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಅವರು, 27 ವಾರಗಳ ಗರ್ಭಿಣಿಯಾಗಿರುವ ಅರ್ಜಿದಾರ ಬಾಲಕಿಯು, ಪೂರ್ಣಾವಧಿ ಗರ್ಭ ಧರಿಸಲು ಬಯಸಿದ್ದಾಳೆ. ಆಕೆಯ ಸಹೋದರ ಮತ್ತು ಪೋಷಕರು ಕೂಡಾ ಇದೇ ನಿಲುವು ಹೊಂದಿದ್ದಾರೆ ಎಂಬುದನ್ನು ಗಮನಿಸಿದರು.

ಪೋಕ್ಸೊ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿರುವ ವ್ಯಕ್ತಿಯೊಂದಿಗೆ ಬಾಲಕಿಯು ದೈಹಿಕ ಸಂಬಂಧ ಹೊಂದಿದ್ದಳು.

ಈ ಹಿಂದೆ ಬಾಲಕಿಯು ತನ್ನ ಗರ್ಭಾವಸ್ಥೆಯ ವೈದ್ಯಕೀಯ ಗರ್ಭಪಾತದ ಸಾಧ್ಯತೆಯನ್ನು ಪರಿಶೀಲಿಸಲು ವೈದ್ಯಕೀಯ ಮಂಡಳಿಯೊಂದನ್ನು ರಚಿಸುವಂತೆ ಗುರು ತೇಗ್ ಬಹಾದ್ದೂರ್ ಆಸ್ಪತ್ರೆಗೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್ ಮೊರೆ ಹೊಕ್ಕಿದ್ದಳು. ಆದರೆ, ಬಳಿಕ ಬಾಲಕಿಯು ಮನಸ್ಸು ಬದಲಾಯಿಸಿ, ಗರ್ಭಾವಸ್ಥೆಗೆ ಕಾರಣನಾದ ಆರೋಪಿಯನ್ನು ಮದುವೆಯಾಗಲು ಬಯಸುವುದಾಗಿ ಹೇಳಿದ್ದಳು.

ಬಾಲಕಿ ಮತ್ತು ಆಕೆಯ ಪೋಷಕರ ನಿರ್ಧಾರವನ್ನು ಪರಿಗಣಿಸಿದ ನ್ಯಾಯಾಲಯವು, ‘ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ–ರಕ್ಷಣೆ) ಕಾಯ್ದೆ 2015ರ ಪ್ರಕಾರ ಅರ್ಜಿದಾರಳಾದ ಬಾಲಕಿಗೆ ಅಗತ್ಯ ಆರೈಕೆ ಮತ್ತು ರಕ್ಷಣೆ ನೀಡುವುದಕ್ಕಾಗಿ ನವದೆಹಲಿಯ ಬಾಲಕಿಯರ ಮಕ್ಕಳ ಮನೆಗೆ ಸ್ಥಳಾಂತರಿಸಬೇಕು’ ಎಂದು ಇದೇ ತಿಂಗಳ ಆರಂಭದಲ್ಲಿ ನೀಡಿದ ಆದೇಶದಲ್ಲಿ ತಿಳಿಸಿದೆ. 

ವೈದ್ಯಕೀಯ ಗರ್ಭಪಾತ ಮಾಡಲು ಸಂಬಂಧಿಸಿದ ಮಹಿಳೆಯ ಒಪ್ಪಿಗೆ ಅತ್ಯಗತ್ಯ. ಒಂದು ವೇಳೆ ಆಕೆ ಅಪ್ರಾಪ್ತ ವಯಸ್ಕಳಾಗಿದ್ದರೆ ಆಕೆಯ ಪೋಷಕರ ಒಪ್ಪಿಗೆ  ಅತ್ಯಗತ್ಯ ಎಂಬುದನ್ನು ನ್ಯಾಯಾಲಯವು ಆದೇಶ ನೀಡುವ ಮುನ್ನ ಗಮನಿಸಿತ್ತು. 

ಅರ್ಜಿದಾರಳು ಗರ್ಭಾವಸ್ಥೆಯು ಪೂರ್ಣಗೊಳಿಸಿದ ಬಳಿಕ, ಹೆತ್ತ ಮಗುವನ್ನು ದತ್ತು ನೀಡಲು ಇಚ್ಛಿಸಿರುವುದಾಗಿ ವೈದ್ಯಕೀಯ ಮಂಡಳಿಯ ವರದಿಯು ತಿಳಿಸಿತ್ತು. ಹಾಗಾಗಿ, ಮಕ್ಕಳ ಕಲ್ಯಾಣ ಸಮಿತಿಯು ಬಾಲಕಿಯನ್ನು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಮಕ್ಕಳ ಮನೆಯಲ್ಲಿರಿಸಲು ಸಲಹೆ ನೀಡಿತ್ತು.  

ಬಾಲಕಿಯ ಪರ ವಕೀಲರು, ‘ಅರ್ಜಿದಾರರು ಆರೋಪಿಯನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದು, ಇದನ್ನು ಖಚಿತಪಡಿಸಿಕೊಳ್ಳಲು ಆರೋಪಿಯನ್ನು ಕರೆಸಬೇಕೆಂದು’ ನ್ಯಾಯಾಲಯಕ್ಕೆ ಒತ್ತಾಯಿಸಿದರು. 

‘ಆದರೆ, ಪ್ರಸ್ತುತ ಅರ್ಜಿಯು ವೈದ್ಯಕೀಯ ಗರ್ಭಪಾತದ ವಿಷಯಕ್ಕೆ ಮಾತ್ರ ಸೀಮಿತವಾಗಿದ್ದರಿಂದ ಆರೋಪಿಯನ್ನು ಕರೆಸುವ ಮೂಲಕ ಅರ್ಜಿಯ ವ್ಯಾಪ್ತಿಯನ್ನು ವಿಸ್ತರಿಸುವ ಒಲವು ಹೊಂದಿಲ್ಲ’ ಎಂದು ನ್ಯಾಯಾಲಯವು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT