ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವಲಯದ ಬಿಕ್ಕಟ್ಟು ಬಗ್ಗೆ ದನಿಯೆತ್ತಿದ ವೈದ್ಯನ ಬಾಯ್ಮುಚ್ಚಿಸಿದ ಪೊಲೀಸ್

Last Updated 27 ಆಗಸ್ಟ್ 2019, 14:32 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧ ಹೇರಿದ ಪರಿಣಾಮಆರೋಗ್ಯ ವಲಯದಲ್ಲುಂಟಾಗಿರುವ ಬಿಕ್ಕಟ್ಟಿನ ಬಗ್ಗೆ ದನಿಯೆತ್ತಿದ ಕಾಶ್ಮೀರದ ವೈದ್ಯರೊಬ್ಬರನ್ನು ಅಲ್ಲಿನ ಪೊಲೀಸರು ಬಾಯ್ಮುಚ್ಚಿಸಿದ್ದಾರೆ ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿ ತೆಗೆದು ಹಾಕುವ ಮೂಲಕ ಜಮ್ಮು ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಹೇರಿತ್ತು.ಜಮ್ಮುನಲ್ಲಿ ಇದೀಗ ಸ್ವಲ್ಪ ಮಟ್ಟಿಗೆ ನಿರ್ಬಂಧ ತೆರವು ಮಾಡಿದ್ದರೂ ಕಾಶ್ಮೀರ ಕಣಿವೆಯಲ್ಲಿ ಇನ್ನೂ ನಿರ್ಬಂಧ ಮುಂದುವರಿದಿದೆ. ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಫರೂಕ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಇನ್ನೂ ಗೃಹ ಬಂಧನದಲ್ಲಿದ್ದಾರೆ ಎಂದು ದಿ ಸ್ಕ್ರಾಲ್ ಡಾಟ್ ಇನ್ ವರದಿ ಮಾಡಿದೆ.

ಸೋಮವಾರ ಶ್ರೀನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿನ ಯುರೊಲಜಿಸ್ಟ್ ಒಮರ್ ಸಲೀಂ ಎಂಬ ವೈದ್ಯರು ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿ ಆರೋಗ್ಯ ವಲಯದಲ್ಲಿನ ಬಿಕ್ಕಟ್ಟನ್ನು ವಿವರಿಸಿದ್ದರು. ಸಲೀಂ ಅವರು 10 ನಿಮಿಷ ಮಾತನಾಡಿದ್ದಾರೆ. ಅಷ್ಟೊತ್ತಲ್ಲಿಪೊಲೀಸರು ಬಂದು ಅವರನ್ನು ಅಲ್ಲಿಂದ ಕರೆದೊಯ್ದಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ಸಂಪರ್ಕ ಸಮಸ್ಯೆ ಇದ್ದ ಕಾರಣ ಸಲೀಂನ್ನು ಪೊಲೀಸರು ಎಲ್ಲಿಗೆ ಕರೆದೊಯ್ದಿದ್ದಾರೆ ಎಂದು ತಿಳಿಯಲು ಸಾಧ್ಯವಾಗಿಲ್ಲ.

ಏತನ್ಮಧ್ಯೆ, ಸರ್ಕಾರದ ವಕ್ತಾರ ರೋಹಿತ್ ಕನ್ಸಾಲ್ ಎರಡೇ ದಿನವೂ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸುವುದನ್ನು ತಪ್ಪಿಸಿಕೊಂಡಿದ್ದಾರೆ.

ಚಿತ್ರ ಕೃಪೆ: ತೌಸೀಫ್ ಮುಸ್ತಫಾ/ಎಎಫ್‌ಪಿ
ಚಿತ್ರ ಕೃಪೆ: ತೌಸೀಫ್ ಮುಸ್ತಫಾ/ಎಎಫ್‌ಪಿ

ವೈದ್ಯ ಸಲೀಂ ಹೇಳಿದ್ದೇನು?
ಸಂಪರ್ಕ ಸಮಸ್ಯೆಯಿಂದಾಗಿ ರೋಗಿಗಳಪ್ರಾಣಕ್ಕೆಹಾನಿಯುಂಟಾಗುತ್ತಿದೆ. ಆಗಸ್ಟ್ 6 ರಂದು ಕಿಮೊಥೆರಪಿಗೊಳಗಾಗಬೇಕಿದ್ದ ರೋಗಿಯೊಬ್ಬರು ಇದ್ದಾರೆ. ಆತ ಆಗಸ್ಟ್ 24ರಂದು ನಮ್ಮ ಬಳಿ ಬಂದಿದ್ದು, ಅವರಿಗೆ ಕಿಮೊಥೆರಪಿ ಔಷಧಿಗಳು ಸಿಕ್ಕಿಲ್ಲ. ಇನ್ನೊಬ್ಬ ಕಿಮೊಥೆರಪಿ ರೋಗಿಗೆ ದೆಹಲಿಯಿಂದ ಔಷಧಿ ತಂದುಕೊಡಬೇಕಾಗಿದ್ದು, ಔಷಧಿಗಾಗಿ ಆರ್ಡರ್ ನೀಡಲು ಸಾಧ್ಯವಾಗುತ್ತಿಲ್ಲ.ಅವರ ಕಿಮೊಥೆರಪಿ ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ.

ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದವರಿಗೆ ಒಂದೇ ಒಂದು ಬಾರಿ ಮಾಡಲಾಗುತ್ತದೆ. ಬ್ಯಾಂಕ್‌ನಲ್ಲಿ ನಗದು ಕೊರತೆ ಇರುವ ಕಾರಣ ಹಲವಾರು ರೋಗಿಗಳಿಗೆ ಆಸ್ಪತ್ರೆಗೆ ಬರುವುದಾಗಲೀ, ಔಷಧಿ ಖರೀದಿ ಮಾಡುವುದಾಗಲೀ ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿರುವ ಎಲ್ಲ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ಸ್ಥಿರ ದೂರವಾಣಿ ಸಂಪರ್ಕ ಪುನಃಸ್ಥಾಪಿಸಿ ಎಂದು ಸಲೀಂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರೋಗಿಗಳಿಗೆ ಡಯಾಲಿಸಿಸ್ ಮಾಡದಿದ್ದರೆ ಅವರು ಪ್ರಾಣ ಕಳೆದುಕೊಳ್ಳುತ್ತಾರೆ. ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ಮಾಡದಿದ್ದರೆ ಅವರು ಸಾಯುತ್ತಾರೆ. ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡದಿದ್ದರೆ ಅವರು ಸಾವಿಗೀಡಾಗುತ್ತಾರೆ ಎಂದಿದ್ದಾರೆ ಸಲೀಂ.

ಇದನ್ನೂ ಓದಿ:ಶ್ರೀನಗರ: ಕೆಲವೆಡೆ ಮತ್ತೆ ನಿರ್ಬಂಧ, ಬಂಧಿತರ ಸಂಖ್ಯೆ 4,000 ಕ್ಕೂ ಹೆಚ್ಚು

ಜಮ್ಮು ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧ ಮತ್ತು ಕರ್ಫ್ಯೂವನ್ನು ತೆರವು ಮಾಡಿ ಎಂದು ಹಲವಾರು ವೈದ್ಯರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಮ್ಮು ಕಾಶ್ಮೀರದಲ್ಲಿನ ಜನರ ಆರೋಗ್ಯ ಸ್ಥಿತಿಗತಿ ಬಗ್ಗೆ 20 ವೈದ್ಯರು ಗುರುವಾರ ಮುಕ್ತವಾಗಿ ಮಾತನಾಡಿದ್ದಾರೆ. ದಿ ಬಿಎಂಜೆಎಂಬ ಮೆಡಿಕಲ್ ಜರ್ನಲ್‌ನಲ್ಲಿಯೂ 18 ವೈದ್ಯರು ಇದೇ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

ಸಂಘರ್ಷದಲ್ಲಿ ಮೂರು ಸಾವು
ಆಗಸ್ಟ್ 5 ರಿಂದ ಇಲ್ಲಿಯವರೆಗೆ ಕಾಶ್ಮೀರದಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಸಂಘರ್ಷದಲ್ಲಿ ಹಲವಾರು ಮಂದಿ ಸಾವಿಗೀಡಾಗಿದ್ದಾರೆ ಎಂದು ಕಾಶ್ಮೀರದಲ್ಲಿರುವ ಕುಟುಂಬಗಳು ಹೇಳಿರುವುದಾಗಿ ದಿ ಇಂಡಿಪೆಂಡೆಂಟ್ ಸೋಮವಾರ ವರದಿ ಮಾಡಿತ್ತು. ಏತನ್ಮಧ್ಯೆ, ಕಾಶ್ಮೀರದಲ್ಲಿ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಸರ್ಕಾರಿ ಮೂಲಗಳು ಹೇಳುತ್ತಿವೆ.

ರಾಜ್ಯದಲ್ಲಿನಪ್ರತಿಭಟನೆಯಲ್ಲಿ ಕನಿಷ್ಟ 3 ಮಂದಿ ಸಾವಿಗೀಡಾಗಿದ್ದಾರೆ ಎಂದು ದಿ ಇಂಡಿಪೆಂಡೆಂಟ್ ವರದಿಯಲ್ಲಿ ಹೇಳಲಾಗಿದೆ. ಭದ್ರತಾ ಸಿಬ್ಬಂದಿಗಳು ಅಶ್ರುವಾಯು, ಪಂಪ್ ಆಕ್ಷನ್ ಗನ್ ಮತ್ತು ಇತರ ಆಯುಧಗಳನ್ನು ಬಳಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ದಾಳಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ತಕ್ಷಣವೇ ಡಿಸ್ಚಾರ್ಜ್ ಮಾಡಬೇಕೆಂದುಪೊಲೀಸರು ಹೇಳಿರುವುದಾಗಿ ಹೆಸರು ಬಹಿರಂಗ ಪಡಿಸಲು ನಿರಾಕರಿಸಿದವೈದ್ಯರೊಬ್ಬರು ಹೇಳಿದ್ದಾರೆ.

ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿದ ನಂತರ ಅಲ್ಲಿ ಯಾರೂ ಸತ್ತಿಲ್ಲ ಎಂದು ಸರ್ಕಾರ ಹೇಳುತ್ತಿರುವುದರಿಂದ ಮರಣ ಪತ್ರವನ್ನು ಪಡೆಯುವುದು ಅಸಾಧ್ಯವಾಗುತ್ತಿದೆ ಎಂದು ಅಲ್ಲಿನ ಕುಟುಂಬವೊಂದು ಹೇಳಿದೆ.

ರಾಹುಲ್ ಗಾಂಧಿ ಮುಂದೆ ಕಣ್ಣೀರಿಟ್ಟ ಮಹಿಳೆ

ಕಳೆದ ಶನಿವಾರರಾಹುಲ್ ಗಾಂಧಿ ಸೇರಿದಂತೆ ವಿರೋಧಪಕ್ಷಗಳ ಮುಖಂಡರ ನಿಯೋಗ ಕಾಶ್ಮೀರಕ್ಕೆ ಹೋದಾಗ ಅವರನ್ನುಶ್ರೀನಗರ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಜಮ್ಮು ಕಾಶ್ಮೀರದ ಅಧಿಕಾರಿಗಳು ದೆಹಲಿಗೆ ವಾಪಸ್ ಕಳುಹಿಸಿದ್ದರು.

ಈ ನಡುವೆ ವಿಮಾನದಲ್ಲಿ ಕುಳಿತುಕೊಂಡಿರುವ ರಾಹುಲ್ ಗಾಂಧಿಯ ಮುಂದೆ ಕಾಶ್ಮೀರಿ ಮಹಿಳೆಯೊಬ್ಬರು ಅಲ್ಲಿನ ಜನರ ಸ್ಥಿತಿಗತಿ ಬಗ್ಗೆ ಹೇಳಿ ಕಣ್ಣೀರಿಡುತ್ತಿರುವ ವಿಡಿಯೊವನ್ನು ಕಾಂಗ್ರೆಸ್ ವಕ್ತಾರೆ ರಾಧಿಕಾ ಖೇರಾ ಟ್ವೀಟಿಸಿದ್ದಾರೆ.

ನಮ್ಮ ಮಕ್ಕಳು ಮನೆಯಿಂದ ಹೊರಗೆ ಹೋಗುವಂತಿಲ್ಲ. ನನ್ನ ಸಹೋದರ ಹೃದ್ರೋಗಿ. ಕಳೆದ 10 ದಿನಗಳಿಂದ ಅವರು ವೈದ್ಯರನ್ನು ಭೇಟಿ ಮಾಡಿಲ್ಲ. ನಾವು ಸಂಕಷ್ಟದಲ್ಲಿದ್ದೇವೆ ಎಂದು ಆ ಮಹಿಳೆ ರಾಹುಲ್ ಗಾಂಧಿ ಮುಂದೆ ದುಃಖ ತೋಡಿಕೊಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT