ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಲಿಕಾಪ್ಟರ್‌ ಪತನ: 7 ಸಾವು | ಕೇದಾರನಾಥದಿಂದ ಗುಪ್ತಕಾಶಿ ಮಾರ್ಗದಲ್ಲಿ ದುರಂತ

ಫಾಲೋ ಮಾಡಿ
Comments

ರುದ್ರ‍ಪ್ರಯಾಗ: ಕೇದಾರನಾಥ ದೇವಾಲಯದಿಂದ ಗುಪ್ತಕಾಶಿಗೆ ಆರು ಭಕ್ತರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ‍್ಟರ್‌ ದಟ್ಟ ಮಂಜಿನ ಕಾರಣದಿಂದಾಗಿ ಮಂಗಳವಾರ ಪತನಗೊಂಡಿದೆ. ಆರು ಮಂದಿ ಭಕ್ತರು ಮತ್ತು ಪೈಲಟ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಆರ್ಯನ್‌ ಏವಿಯೇಷನ್‌ ಸಂಸ್ಥೆಯ ಬೆಲ್‌–407 ಹೆಲಿಕಾಪ್ಟರ್‌ಗೆ ಬೆಳಿಗ್ಗೆ 11.45ರ ಹೊತ್ತಿಗೆ ಗರುಡಚಟ್ಟಿ ಎಂಬಲ್ಲಿ ಬೆಂಕಿ ಹತ್ತಿಕೊಂಡಿತು ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ, ಉತ್ತರಾಖಂಡ ಮತ್ತು ದೆಹಲಿಯ ವಿಪತ್ತು ಸ್ಪಂದನಾ ಪಡೆ ಮತ್ತು ಪೊಲೀಸರು ಜತೆಯಾಗಿ ಮೃತ ದೇಹಗಳನ್ನು ಕೇದಾರನಾಥದ ಹೆಲಿಪ್ಯಾಡ್‌ಗೆ ತಂದಿದ್ದಾರೆ.

ಗುಜರಾತ್‌ನ ಪೂರ್ವ ರಾಮಾನುಜ (26), ಕೃತಿ ಬ್ರಾರ್‌ (30), ಉರ್ವಿ ಬ್ರಾರ್‌ (25), ತಮಿಳುನಾಡಿನ ಸುಜಾತಾ (56), ಪ್ರೇಮ್‌ ಕುಮಾರ್‌ ಮತ್ತು ಕಲಾ (60) ಮೃತಪಟ್ಟವರು. ಪೈಲಟ್‌ ಅನಿಲ್ ಸಿಂಗ್‌ (57) ಅವರು ಮಹಾರಾಷ್ಟ್ರದವರು.

ಹಾರಾಟ ಆರಂಭಿಸಿದ ಐದಾರು ಸೆಕೆಂಡ್‌ಗಳಲ್ಲಿಯೇ ಹೆಲಿಕಾಪ್ಟರ್‌ ಪತನಗೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಹೆಲಿಕಾಪ್ಟರ್‌ ಛಿದ್ರಗೊಂಡಿದ್ದು ಅದರ ಭಾಗಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ. ಪತನಗೊಂಡ ಸಂದರ್ಭದಲ್ಲಿ ದಟ್ಟ ಮಂಜು ಇದ್ದ ಕಾರಣ ಏನೂ ಕಾಣಿಸುತ್ತಿರಲಿಲ್ಲ.ಏನೂ ಕಾಣದೇ ಇದ್ದರೂ ದೊಡ್ಡ ಶಬ್ದ ಕೇಳಿದ ಜಾಗಕ್ಕೆ ಎಲ್ಲರೂ ಓಡಿ ಹೋದರು ಎಂದು ಅಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಮನೋಹರ್ ಸಿಂಗ್ ಹೇಳಿದ್ದಾರೆ.

ದಟ್ಟ ಮಂಜಿನಿಂದಾಗಿ ಪೈಲಟ್‌ಗೆ ಏನೂ ಕಾಣಿಸದಿದ್ದುದೇ ಪತನಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.ವಿಮಾನ ಅಪಘಾತ ತನಿಖಾ ಬ್ಯೂರೊ ಮತ್ತು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯದ ತಂಡಗಳು ಪ್ರಕರಣದ ತನಿಖೆ ನಡೆಸಲಿವೆ.

ಹೆಲಿಕಾಪ್ಟರ್ ಸೇವೆಯು ಇತ್ತೀಚಿನ ದಿನಗಳಲ್ಲಿ ಇಲ್ಲಿ ಹಲವು ಪಟ್ಟು ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತಹ ಸುರಕ್ಷತೆ ಮತ್ತು ನಿಯಂತ್ರಣ ವ್ಯವಸ್ಥೆಗಳು ಇಲ್ಲ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಕಚೇರಿ ಕೂಡ ಇಲ್ಲಿ ಇಲ್ಲ.

2019ರ ಆಗಸ್ಟ್‌ನಲ್ಲಿ ಕೂಡ ಇಲ್ಲಿ ಹೆಲಿಕಾಪ್ಟರ್ ಒಂದು ಪತನಗೊಂಡು ಮೂವರು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT